ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಘಟನೆ– ಮನಸ್ಸು ಒಗ್ಗೂಡಲಿ

Last Updated 15 ಫೆಬ್ರುವರಿ 2019, 15:56 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಸಂಘಟನೆಗಳು ಮತ್ತು ಕನ್ನಡದ ಮನಸ್ಸುಗಳು ಒಗ್ಗೂಡಬೇಕು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ‘ಹಲವು ಮಹನೀಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಹಿತ್ಯ, ಕ್ರೀಡೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲೆಯ ಸಾಧಕರು ಹೆಸರು ಮಾಡಿದ್ದಾರೆ’ ಎಂದರು.

‘ಹೊಸತನದ ಸೃಜನಶೀಲತೆಯ ಹುಟ್ಟು ಮನೆಯಿಂದಲೇ ಆರಂಭವಾಗುತ್ತದೆ. ಕವಿಗಳು ವಿಭಿನ್ನ ರೀತಿಯಲ್ಲಿ ಹೊಸ ವಿಷಯಗಳ ಬಗ್ಗೆ ಆಲೋಚಿಸಬೇಕು. ಆಧುನಿಕ ಯುಗದಲ್ಲಿ ಗಟ್ಟಿ ಸಾಹಿತ್ಯ ರಚಿಸಬೇಕು. ಕಾವ್ಯಕ್ಕೆ ಬೇಕಾದ ರೂಪರೇಷೆ ಅರ್ಥೈಸಿಕೊಂಡು ಕಾವ್ಯ ರಚಿಸಬೇಕು. ಜನಪ್ರತಿನಿಧಿಗಳನ್ನು ಜಾಗೃತಿಗೊಳಿಸುವ ನೆಲೆಯಲ್ಲಿ ಕವಿತೆ ಹಾಡಾಗಿ ಹೊರಬರಬೇಕು. ವಸ್ತುಸ್ಥಿತಿ ಅರಿತು ಕಾವ್ಯ ರಚಿಸಬೇಕು’ ಎಂದು ಹೇಳಿದರು.

‘ಮನೆಗೊಂದು ಕವಿಗೋಷ್ಠಿ ನಡೆಸುವುದರಿಂದ ಮನೆಯಲ್ಲಿರುವ ಎಲ್ಲರಿಗೂ ಭಾಷೆ, ಕಲೆ, ಸಾಹಿತ್ಯ, ಸಂಗೀತ ವಿಚಾರವನ್ನು ತಿಳಿಸುವ ಮೂಲಕ ಕನ್ನಡದ ಕಂಪು ಪಸರಿಸಬಹುದು. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಆಶಿಸಿದರು.

ಕ್ರಿಯಾಶೀಲವಾಗಿವೆ: ‘ಕನ್ನಡ ಭಾಷೆಯ ಉಳಿವಿನ ದೃಷ್ಟಿಯಿಂದ ಸಂಘಟನೆಗಳು ಮತ್ತು ಸಂಘಟಕರು ಒಟ್ಟಾಗಿ ಕೆಲಸ ಮಾಡಬೇಕು. ಹಲವು ಕನ್ನಡಪರ ಸಂಘಟನೆಗಳಿದ್ದರೂ ಬೆರಳೆಣಿಕೆಯಷ್ಟು ಸಂಘಟನೆಗಳು ಮಾತ್ರ ಕ್ರಿಯಾಶೀಲವಾಗಿವೆ. ಈ ಪೈಕಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ 3 ದಶಕದಿಂದ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ’ ಎಂದು ತಾಲ್ಲೂಕು ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿಗಳಾದ ಆನಂದ್‌, ಪರಮೇಶ್ವರ್‌, ಸುಬ್ಬರಾಮಯ್ಯ, ನಾರಾಯಣಸ್ವಾಮಿ, ರವೀಂದ್ರಸಿಂಗ್, ಮುನಿರಾಜ್, ಡ್ಯಾನಿಡ ಕೃಷ್ಣಮೂರ್ತಿ, ಕೆ.ಶ್ರೀನಿವಾಸ, ಶರಣಪ್ಪ ಗಬ್ಬೂರು ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT