ಸೋಮವಾರ, ಡಿಸೆಂಬರ್ 9, 2019
17 °C

ಕನ್ನಡ ರಾಜ್ಯೋತ್ಸವ: ಚಾಲಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಕ್ಯಾಲನೂರು ಗ್ರಾಮದ ಕನ್ನಡ ಯುವಕ ಸಂಘದ ಸದಸ್ಯರು ಗ್ರಾಮಕ್ಕೆ ಬರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗೆ ಗುರುವಾರ ಅಲಂಕಾರ ಮಾಡಿ ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಈ ಬಸ್‌ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು, ನಗರಕ್ಕೆ ಹೋಗಿ ಬರುವ ರೈತರು, ವ್ಯಾಪಾರಿಗಳು ಹಾಗೂ ರೋಗಿಗಳ ಪಾಲಿಗೆ ಏಕೈಕ ಸಾರಿಗೆ ಸಂಪರ್ಕ ವ್ಯವಸ್ಥೆಯಾಗಿದೆ. ಗ್ರಾಮದಿಂದ ಪ್ರತಿನಿತ್ಯ ನಗರ, ಪಟ್ಟಣ ಪ್ರದೇಶಕ್ಕೆ ಹೋಗಿ ಬರುವ ಗ್ರಾಮಸ್ಥರು ಈ ಬಸ್‌ ಅವಲಂಬಿಸಿದ್ದಾರೆ.

ಬಸ್‌ ಚಾಲಕ ಹುಸೇನ್ ಸಾಬ್ ನವೆಂಬರ್‌ ಅಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗುವ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಅವರನ್ನು ಸನ್ಮಾನಿಸಿದರು. ಉತ್ತಮ ಸೇವೆ ಸಲ್ಲಿಸುವ ಮೂಲಕ ಪ್ರಯಾಣಿಕರ ಪ್ರೀತಿಗೆ ಪಾತ್ರರಾಗಿರುವ ಹುಸೇನ್‌ ಸಾಬು ಹಲವು ವರ್ಷಗಳಿಂದ ಕ್ಯಾಲನೂರು ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹುಸೇನ್ ಸಾಬ್, ‘ಗ್ರಾಮದ ವಿದ್ಯಾರ್ಥಿಗಳು ಮತ್ತು ಜನರೊಂದಿಗೆ ಹಲವು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದೇನೆ. ಗ್ರಾಮದ ಪ್ರಯಾಣಿಕರಿಗೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿಯಿದೆ’ ಎಂದು ಹೇಳಿದರು.

ಸೇವೆ ಮಾದರಿ: ‘ಕರ್ತವ್ಯ ನಿಷ್ಠೆಗೆ ಗೌರವ ಇದ್ದೇ ಇರುತ್ತದೆ ಎಂಬುದಕ್ಕೆ ಹುಸೇನ್ ಸಾಬ್ ಅವರು ಗ್ರಾಮದ ಜನರೊಂದಿಗೆ ಹೊಂದಿರುವ ಸಂಬಂಧವೇ ಸಾಕ್ಷಿ’ ಎಂದು ಕ್ಯಾಲನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಸ್ಮರಿಸಿದರು.

‘ರಿಯಾಯಿತಿ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ನೋಡಿದರೆ ಸಾಕಷ್ಟು ಚಾಲಕರು ಬಸ್‌ ನಿಲ್ಲಿಸದೆ ಹೋಗುತ್ತಾರೆ ಎಂಬ ದೂರುಗಳಿವೆ. ಆದರೆ, ಹುಸೇನ್‌ ಸಾಬ್‌ ಎಂದಿಗೂ ಆ ರೀತಿ ವರ್ತಿಸಿಲ್ಲ. ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಕಂಡರೆ ಬಸ್‌ ನಿಲ್ಲಿಸಿ ಹತ್ತಿಸಿಕೊಳ್ಳುತ್ತಿದ್ದರು. ಈ ಸೇವಾ ಮನೋಭಾವ ಮಾದರಿ’ ಎಂದು ಬಣ್ಣಿಸಿದರು.

ವಿವಿಧ ಬಗೆಯ ಹೂವುಗಳು, ಬಣ್ಣದ ಕಾಗದಗಳಿಂದ ಬಸ್‌ಗೆ ಅಲಂಕಾರ ಮಾಡಿ ಧ್ವನಿವರ್ಧಕ ಅಳವಡಿಸಿ ಪೂಜೆ ಸಲ್ಲಿಸಲಾಯಿತು. ಗ್ರಾ.ಪಂ ಸದಸ್ಯರಾದ ರಾಮಣ್ಣ, ಜಮೀರ್ ಪಾಷಾ, ಮಾಜಿ ಸದಸ್ಯರಾದ ಷೇಕ್ ಮಹಮ್ಮದ್‌, ಲೋಕೇಶ್, ಯುವಕರ ಸಂಘದ ಸದಸ್ಯರಾದ ಆನಂದ್, ವೆಂಕಟೇಶ್‌ನಾಯಕ್, ಮಹೇಶ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)