ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಕರಗ ಮಹೋತ್ಸವ

Last Updated 21 ಏಪ್ರಿಲ್ 2019, 6:55 IST
ಅಕ್ಷರ ಗಾತ್ರ

ಕೋಲಾರ: ನಗರದ ಕಠಾರಿಪಾಳ್ಯ ಧರ್ಮರಾಯಸ್ವಾಮಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಅಪಾರ ಜನಮನ್ನಣೆ ಗಳಿಸಿರುವ ಕಠಾರಿಪಾಳ್ಯದ ಹೂವಿನ ಕರಗ ಮಹೋತ್ಸವದಲ್ಲಿ ಬೇತಮಂಗಲದ ಪೂಜಾರಿ ಕೃಷ್ಣಮೂರ್ತಿ ಅವರು 7ನೇ ಬಾರಿಗೆ ಕರಗ ಹೊತ್ತರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಅವರು ಮಂಗಳವಾದ್ಯ, ಹಲಗೆಗಳ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ನೋಡುಗರ ಗಮನ ಸೆಳೆದರು.

ಧರ್ಮರಾಯಸ್ವಾಮಿ ದೇವಾಲಯಕ್ಕೆ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ವೀರಕುಮಾರರು ಅಲಗು ಸೇವೆ ಅರ್ಪಿಸಿದ್ದು ಆಕರ್ಷಕವಾಗಿತ್ತು. ಹೂವಿನ ಕರಗದೊಂದಿಗೆ ರಕ್ಷಕರಂತೆ ಕತ್ತಿ ಹಿಡಿದು ಸಂಚರಿಸಿದ ವೀರಕುಮಾರರು ನೃತ್ಯ ವೇದಿಕೆ ಮೇಲೆ ಕತ್ತಿ ಝಳಪಿಸುತ್ತಾ ನಡೆಸಿದ ಅಲಗು ಸೇವೆ ಜನರ ಮನಸೂರೆಗೊಂಡಿತು.

ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ದೇಗುಲ ಪ್ರದಕ್ಷಿಣೆ ಹಾಕಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದೊಂದಿಗೆ ಸಾಗಿದರು. ಜನರ ಶಿಳ್ಳೆ, ಜೈಕಾರ, ಕರತಾಡನ ಮುಗಿಲು ಮುಟ್ಟಿತ್ತು. ಗಂಟೆನಾದ, ಪೊಂಬು ವಾದ್ಯದೊಂದಿಗೆ ಕರಗ ಸಾಗಿತು. ಪ್ರತಿ ಮನೆ ಮುಂದೆಯೂ ಕರಗಕ್ಕೆ ಪೂಜೆ ಮಾಡಿ ಸತ್ಕರಿಸಲಾಯಿತು.

ನಗರದ ಡೂಂಲೈಟ್‌ ವೃತ್ತ, ಧರ್ಮರಾಯ ನಗರ, ಕಠಾರಿಪಾಳ್ಯ ಶಾಲಾ ಆವರಣದ ವೇದಿಕೆಯಲ್ಲಿ ನೃತ್ಯ ನಡೆಯಿತು. ಕರಗ ಸಾಗಿದ ಮಾರ್ಗದಲ್ಲಿ ಕೆಲ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT