ಗುರುವಾರ , ಮೇ 13, 2021
22 °C
ಖಾಸಗಿ ಶಾಲಾ ಮುಖ್ಯಸ್ಥರ ಸಭೆಯಲ್ಲಿ ಅಭ್ಯರ್ಥಿ ಗೋಪಾಲಗೌಡ ಮನವಿ

ಕಸಾಪ ಚುನಾವಣೆ: ಜಯಶೀಲನಾಗಿ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನನಗೆ ಬೆಂಬಲ ಸೂಚಿಸುವುದರ ಜತೆಗೆ ಅತ್ಯಧಿಕ ಮತ ನೀಡುವ ಮೂಲಕ ಜಯಶೀಲನಾಗಿ ಮಾಡಬೇಕು’ ಎಂದು ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿ.ಗೋಪಾಲಗೌಡ ಮನವಿ ಮಾಡಿದರು.

ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ, ‘ಕಸಾಪ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ. ಪರಿಷತ್ತಿನ ಸದಸ್ಯತ್ವ ಹೊಂದಿರುವ ಪ್ರತಿ ಮತದಾರರು ತಪ್ಪದೇ ಮತ ಚಲಾಯಿಸಬೇಕು’ ಎಂದು ಕೋರಿದರು.

‘ವಿಶ್ವವನ್ನು ಕಾಡುತ್ತಿರುವ ಕೋವಿಡ್‌ 2ನೇ ಅಲೆ ಗಂಭೀರವಾಗಿದೆ. ಸರ್ಕಾರದ ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಕಸಾಪ ಚುನಾವಣಾ ಪ್ರಚಾರಕ್ಕೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಅಭ್ಯರ್ಥಿ ಗೋಪಾಲಗೌಡರ ಪರ ಪ್ರಚಾರ ಮಾಡುವ ಮೂಲಕ ಮತದಾರರನ್ನು ಸೆಳೆಯಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ ನಾಗರಾಜ್ ತಿಳಿಸಿದರು.

‘ಕಸಾಪ ಚುನಾವಣೆಗೆ ಕಾಲಾವಕಾಶ ಕಡಿಮೆಯಿದೆ. ಈ ಸಮಯವನ್ನು ವ್ಯರ್ಥ ಮಾಡದೆ ಮತದಾರರನ್ನು ನೇರವಾಗಿ ಸಂಪರ್ಕಿಸಿ ಮನವೊಲಿಸಬೇಕು. ನಾಯಕತ್ವ ಗುಣ ಇರುವವರು ಕಾರ್ಯಕರ್ತರಂತೆ ಶ್ರಮಿಸಿ ಅಭ್ಯರ್ಥಿಯ ಗೆಲುವಿಗೆ ಕಾರಣೀಕರ್ತರಾಗಬೇಕು’ ಎಂದು ಹೇಳಿದರು.

1,750 ಮತ: ‘ಕೋಲಾರ ನಗರದಲ್ಲಿ 1,750 ಮತಗಳಿದ್ದು, ಪರಿಷತ್ತಿನ ಸದಸ್ಯರನ್ನು ಭೇಟಿ ಮಾಡಿ ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ಬರುವಂತೆ ಮಾಡುವ ಮೂಲಕ ಪರಿಷತ್ತಿನ ಉಳಿವಿಗೆ ದುಡಿಯೋಣ. ಹಿಂದಿನ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಕೋಲಾರದಲ್ಲಿ ಅತಿ ಹೆಚ್ಚು ವಿರೋಧವಿರುವುದರಿಂದ ಸದಸ್ಯರು ಹೊಸಬರಿಗೆ ಮತ ಚಲಾಯಿಸಲು ಆಸಕ್ತಿ ಹೊಂದಿದ್ದಾರೆ. ಸದಸ್ಯರನ್ನು ಭೇಟಿ ಮಾಡುವ ಮೂಲಕ ಕನ್ನಡದ ಕಟ್ಟಾಳುಗಳಾಗಿ ಅಭ್ಯರ್ಥಿ ಗೆಲುವಿಗೆ ಮುನ್ನಡಿ ಬರೆಯೋಣ’ ಎಂದರು.

ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ, ಸದಸ್ಯರಾದ ನಾಗಭೂಷಣ್, ಜಗದೀಶ್, ಲಕ್ಷ್ಮೀನಾರಾಯಣ, ಪ್ರಭಾಕರ್, ಸುಬ್ಬರಾಮಯ್ಯ, ಮಂಜುನಾಥ್, ಕೆ.ಎನ್.ಪರಮೇಶ್ವರನ್, ಪ್ರಾಧ್ಯಾಪಕ ಮುರಳೀಧರ್ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.