ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಊರ ಮಧ್ಯೆ ಕೆ.ಸಿ.ವ್ಯಾಲಿ ಕೊಳಚೆನೀರು!

ಕಾಲುವೆ ಉಕ್ಕಿ ಹರಿದರೆ ಮನೆಗಳಿಗೆ ನುಗ್ಗುವ ಗಲೀಜು
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೋಲಾರ: ಊರಿನ ನಡುವೆ ಮನೆಗಳಿಗೆ ಅಂಟಿಕೊಂಡು ಹಾದು‌ ಹೋಗಿರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆ. ದುರ್ವಾಸನೆ ಜೊತೆಗೆ ನಿತ್ಯ ಸೊಳ್ಳೆ, ನೊಣಗಳ ಹಾವಳಿ. ಮಳೆ ಜೋರಾದರೆ ಮನೆಗೆ ನುಗ್ಗುವ ನೀರು. ಹಸಿರು ಬಣ್ಣಕ್ಕೆ ತಿರುಗಿರುವ ಬಾವಿ ನೀರು! –ಇದು, ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ದುಸ್ಥಿತಿ.

ಕಾಲುವೆಯ ಸುತ್ತ ಬೆಳೆದು ನಿಂತಿರುವ ಆಳುದ್ದದ ಕಳೆ, ಕೆರೆ ಸುತ್ತಲೂ ಒಣಗಿರುವ ತೆಂಗಿನ ಮರ. ಸದಾ ಶೀತ, ಜ್ವರ ಸೇರಿದಂತೆ ಒಂದಿಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಹಿಂಡು...

ಕೆ.ಸಿ.ವ್ಯಾಲಿ ದುಷ್ಪರಿಣಾಮ ಕುರಿತು ಸಾಕ್ಷಾತ್ ವರದಿಗಾಗಿ ‘ಪ್ರಜಾವಾಣಿ’ ಪ್ರತಿನಿಧಿ ಲಕ್ಷ್ಮಿಸಾಗರ ಗ್ರಾಮಕ್ಕೆ ಭೇಟಿ ನೀಡಿದಾಗ ಕಂಡುಬಂದ ದೃಶ್ಯಗಳಿವು. 

ಮೊದಲ ಸಂತ್ರಸ್ತ ಗ್ರಾಮ: ಬೆಂಗಳೂರಿನಿಂದ ಕೆ.ಸಿ.ವ್ಯಾಲಿ ಕೊಳಚೆನೀರು ಮೊದಲು ಬಂದು ಸೇರುವುದೇ ಲಕ್ಷ್ಮಿಸಾಗರ ಕೆರೆಗೆ. ನಂತರ ಊರಿನೊಳಗೆ ಕಾಲುವೆ  ಮೂಲಕ ಹರಿದು ಉದ್ದಪ್ಪನಹಳ್ಳಿ ಕೆರೆಗೆ ಸೇರುತ್ತದೆ. ಅಲ್ಲಿಂದಲೇ ಸಮಸ್ಯೆ ಆರಂಭ. ಕಾಲುವೆ ಎರಡು ಬದಿಯಲ್ಲಿ ಮನೆಗಳಿವೆ. 

‘ಸೊಳ್ಳೆಗಳ ಕಾಟದಿಂದ ಹಗಲು ಹೊತ್ತಿನಲ್ಲೂ ಮನೆಗಳ ಕಿಟಕಿ, ಬಾಗಿಲು ತೆರೆಯಲು ಆಗದ ಪರಿಸ್ಥಿತಿ ಇದೆ. ಬಾಗಿಲಿಗೂ ಸೊಳ್ಳೆ ಪರದೆ ಕಟ್ಟಿದ್ದೇವೆ. ಸಂಜೆ 4 ಗಂಟೆ ಕಳೆದರೆ ಹೊರಗಡೆ ತಿರುಗಾಡಲು ಸಾಧ್ಯವಿಲ್ಲ. ಸೊಳ್ಳೆಗಳ ಹಿಂಡು ಮುತ್ತಿಕೊಳ್ಳುತ್ತವೆ. ನೀರು ಹರಿಯುವಾಗ ಮೂಗಿಗೆ ರಾಚುವ ದುರ್ವಾಸನೆಗೆ ತಲೆಸುತ್ತು, ಉಬ್ಬಳಿಕೆ ಮತ್ತು ವಾಂತಿ ಬರುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು. 

ಈ ಸಮಸ್ಯೆ ಬಗೆಹರಿಸಲು ಯೋಜನೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಮನವಿ ಮಾಡಿಕೊಂಡಿದ್ದೇವೆ.  ಈವರೆಗೂ ಮುಕ್ತಿ ಸಿಕ್ಕಿಲ್ಲ. ಕಾಲುವೆಗೆ ಸ್ವಲ್ಪ ದೂರ ಸಿಮೆಂಟ್‌ ಕಟ್ಟೆ ಕಟ್ಟಿ ಕೈತೊಳೆದುಕೊಂಡಿದ್ದಾರೆ ಎನ್ನುವುದು ಗ್ರಾಮಸ್ಥರ ದೂರು.

‘ಜೋರು ಮಳೆಯಾದಾಗ ಕಾಲುವೆಯ ನೀರು ಮನೆಗಳಿಗೆ ನುಗ್ಗುತ್ತದೆ. ಮಕ್ಕಳು ಈ ನೀರಿನಲ್ಲೇ ಇಳಿದು ಆಟವಾಡುತ್ತಿರುತ್ತಾರೆ. ಶೀತ, ಕೆಮ್ಮು, ಜ್ವರ, ನವೆ, ಇನ್ನಿತರ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಒಮ್ಮೆ ಆಸ್ಪತ್ರೆಗೆ ಹೋದರೆ ಕನಿಷ್ಠ ಒಂದು ಸಾವಿರ ಖರ್ಚಾಗುತ್ತದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್‌.

ಹತ್ತಾರು ವರ್ಷಗಳಿಂದ ಗ್ರಾಮದಲ್ಲಿ ಜನ ನೆಲೆಸಿದ್ದಾರೆ. 2018ರಲ್ಲಿ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಬಂತು. ಸಮಸ್ಯೆಯಿಂದ ಬೇಸತ್ತು ಹಲವರು ಮನೆ ತೊರೆದಿದ್ದಾರೆ. ಜನರಿಲ್ಲದೆ ಗ್ರಾಮದ ಕೆಲವು ಮನೆಗಳು ಈಗಲೂ ಪಾಳು ಬಿದ್ದಿವೆ.

‘ಇಂಥ ಪರಿಸ್ಥಿತಿ ಬರುತ್ತದೆ ಎಂಬುದು ಗೊತ್ತಿದ್ದರೆ ಖಂಡಿತ ಇಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರಲಿಲ್ಲ. ಕಾಲುವೆಗೆ ತಡೆಗೋಡೆ ಇಲ್ಲ. ಆಡುವ ಮಕ್ಕಳು ಬಿದ್ದರೇನು ಗತಿ? ಸೊಳ್ಳೆ, ನೊಣ, ಹಾವುಗಳ ಕಾಟದಿಂದ ಸಾಕಾಗಿದೆ’ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಕೆ.ಸಿ.ವ್ಯಾಲಿ ಪರಿಣಾಮ ಹಸಿರು ಬಣ್ಣಕ್ಕೆ ತಿರುಗಿರುವ ಲಕ್ಷ್ಮಿಸಾಗರ ಗ್ರಾಮದೊಳಗಿನ ಬಾವಿ ನೀರು
ಕೆ.ಸಿ.ವ್ಯಾಲಿ ಪರಿಣಾಮ ಹಸಿರು ಬಣ್ಣಕ್ಕೆ ತಿರುಗಿರುವ ಲಕ್ಷ್ಮಿಸಾಗರ ಗ್ರಾಮದೊಳಗಿನ ಬಾವಿ ನೀರು
ಲಕ್ಷ್ಮಿಸಾಗರ ಗ್ರಾಮದಲ್ಲಿನ ಮನೆಗಳಿಗೆ ಅಂಟಿಕೊಂಡೇ ಸಾಗಿರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆ
ಲಕ್ಷ್ಮಿಸಾಗರ ಗ್ರಾಮದಲ್ಲಿನ ಮನೆಗಳಿಗೆ ಅಂಟಿಕೊಂಡೇ ಸಾಗಿರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆ
ಲಕ್ಷ್ಮಿಸಾಗರ ಗ್ರಾಮದ ಪ್ರವೇಶ ದ್ವಾರದಲ್ಲೇ ಕೆ.ಸಿ.ವ್ಯಾಲಿ ನೀರು ತುಂಬಿಕೊಂಡಿರುವ ಕೆರೆ
ಲಕ್ಷ್ಮಿಸಾಗರ ಗ್ರಾಮದ ಪ್ರವೇಶ ದ್ವಾರದಲ್ಲೇ ಕೆ.ಸಿ.ವ್ಯಾಲಿ ನೀರು ತುಂಬಿಕೊಂಡಿರುವ ಕೆರೆ
ಲಕ್ಷ್ಮಿಸಾಗರ ಗ್ರಾಮಕ್ಕೆ ಕುಡಿಯಲು ಕೊಳವೆಬಾವಿ ನೀರು ಶುದ್ಧೀಕರಿಸಿ ಪೂರೈಸಲಾಗುತ್ತಿದೆ. ಎರಡು ದಿನ ಪಾತ್ರೆಯಲ್ಲಿಟ್ಟರೆ ನೀರಿನ ಮೇಲೆ ಬಿಳಿ ಬಣ್ಣ ಕಾಣಿಸಿಕೊಳ್ಳುತ್ತದೆ. ನಂತರ ನೊರೆ ರೀತಿ ಕಾಣುತ್ತದೆ ವಾಸನೆ ಬರುತ್ತದೆ. ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆ.ಸಿ.ವ್ಯಾಲಿ ನೀರು ಮಿಶ್ರಣವಾಗುತ್ತದೆಯೇ ಎಂಬ ಭಯ ಆವರಿಸಿದೆ.
-ಲಕ್ಷ್ಮಿಸಾಗರ, ಗ್ರಾಮಸ್ಥರು
ಯಾರಿಗೆ ಯಾವಾಗ ಯಾವ ಕಾಯಿಲೆ ಬರುತ್ತದೆಯೋ ಗೊತ್ತಿಲ್ಲ. ಊರಿನಲ್ಲಿ ಮಕ್ಕಳಿಗೆ ಪದೇ ಪದೇ ಜ್ವರ ಶೀತ ಕಾಣಿಸಿಕೊಳ್ಳುತ್ತಿದೆ. ಬಾವಿ ನೀರಿನಲ್ಲಿ ಸ್ನಾನ ಮಾಡಿದರೂ ಮೈ ಕೆರೆತ ಬರುತ್ತದೆ
–ಮಂಜುನಾಥ್‌, ಗ್ರಾಮಸ್ಥ, ಲಕ್ಷ್ಮಿಸಾಗರ ಕೋಲಾರ
ನೀರು ಹರಿಯುವ ಜಾಗದಲ್ಲಿನ ತೆಂಗಿನ ಮರಗಳು ಒಣಗುತ್ತಿವೆ ಮೀನುಗಳು ಸಾಯುತ್ತಿವೆ. ದೂರು ನೀಡಿದರೂ ಕೇಳಿಸಿಕೊಳ್ಳುತ್ತಿಲ್ಲ. ಮೂರನೇ ಹಂತದ ಶುದ್ಧೀಕರಣ ಮಾಡಲೇಬೇಕು
-ಶಂಕರ್‌, ಸದಸ್ಯ ಲಕ್ಷ್ಮಿಸಾಗರ ಗ್ರಾ.ಪಂ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT