ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕೋಡಿ ಹೊಡೆಯಲು ವಿರೋಧ

ಕೆ.ಸಿ ವ್ಯಾಲಿ ಯೋಜನೆ: ಅಧಿಕಾರಿಗಳು– ರೈತರ ವಾಗ್ವಾದ
Last Updated 4 ಜೂನ್ 2020, 17:36 IST
ಅಕ್ಷರ ಗಾತ್ರ

ಕೋಲಾರ: ಬಂಗಾರಪೇಟೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಉದ್ದೇಶಕ್ಕೆ ತಾಲ್ಲೂಕಿನ ಮುದುವತ್ತಿ ಕೆರೆ ಕೋಡಿ ಹೊಡೆಯಲು ಮುಂದಾದ ಅಧಿಕಾರಿಗಳಿಗೆ ರೈತರು ತಡೆಯೊಡ್ಡಿ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಗುರುವಾರ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಮುದುವತ್ತಿ ಕೆರೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬರುತ್ತಿದೆ. ಕೆರೆಯಿಂದ ಹೊರ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಮತ್ತು ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳು ಕೋಡಿ ಹೊಡೆಯಲು ಸ್ಥಳಕ್ಕೆ ಬಂದಿದ್ದರು.

ಈ ವಿಷಯ ತಿಳಿದ ಮುದುವತ್ತಿ ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರು ಅಧಿಕಾರಿಗಳಿಗೆ ಪ್ರತಿರೋಧ ತೋರಿ ಕೋಡಿ ಹೊಡೆಯದಂತೆ ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

‘ಬೇಸಿಗೆ ಕಾರಣಕ್ಕೆ ಹಾಗೂ ಬೆಂಗಳೂರಿನಿಂದ ಜಿಲ್ಲೆಗೆ ಹರಿದು ಬರುವ ಕೆ.ಸಿ ವ್ಯಾಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಮುದುವತ್ತಿ ಕೆರೆಯಿಂದ ಮುಂದಿನ ಕೆರೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ. ಕೋಡಿಯ ಎತ್ತರ ತಗ್ಗಿಸಿದರೆ ನೀರು ಮುಂದಕ್ಕೆ ಸರಾಗವಾಗಿ ಹರಿಯುತ್ತದೆ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು.

ವಿರೋಧವಿಲ್ಲ: ‘ಮುಂದಿನ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆ ಭಾಗದವರು ರೈತರೇ. ಕೆರೆ ಕೋಡಿ ಹೊಡೆದು ನೀರನ್ನು ಹೊರಗೆ ಹರಿಸಿದರೆ ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಸಮಸ್ಯೆಯಾಗುತ್ತದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಮುದುವತ್ತಿ, ಕೋನಾಪುರ, ಕೋರಗಂಡಹಳ್ಳಿ, ಬೆಗ್ಲಿ ಹೊಸಹಳ್ಳಿ, ಛತ್ರಕೋಡಿಹಳ್ಳಿ ಕೆರೆ ಮೂಲಕ ಕೋಲಾರಮ್ಮ ಅಮಾನಿ ಕೆರೆಗೆ ನೀರು ಹರಿಯಬೇಕು. ಅಧಿಕಾರಿಗಳು ಗುರುತ್ವಾಕರ್ಷಣೆ ಮೂಲಕ ಹರಿಯಬೇಕಿರುವ ನೀರಿನ ದಿಕ್ಕನ್ನೇ ಬದಲಿಸಿ ಕೋಡಿ ಹಾಳು ಮಾಡಿ ನೀರು ಹರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಕೆ.ಸಿ ವ್ಯಾಲಿ ಯೋಜನೆಯ ಉದ್ದೇಶ. ಯೋಜನೆಯಲ್ಲಿ ಜಿಲ್ಲೆಗೆ ಸದ್ಯ 200 ಎಂಎಲ್‌ಡಿ ನೀರು ಹರಿದು ಬರುತ್ತಿದೆ. ಅಧಿಕಾರಿಗಳು ಯಾರದೋ ಪ್ರಭಾವಕ್ಕೆ ಮಣಿದು ಕೆರೆಗಳ ಕೋಡಿ ಕೀಳುವುದು, ಚೆಕ್‌ಡ್ಯಾಂ ನಾಶಪಡಿಸುವುದು ಸರಿಯಲ್ಲ. ಅಧಿಕಾರಿಗಳಿಗೆ ಸದುದ್ದೇಶವಿದ್ದರೆ 400 ಎಂಎಲ್‌ಡಿ ನೀರು ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT