ಕೋಲಾರ: ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಕೇಂದ್ರ ಸರ್ಕಾರದ ‘ಪಿಎಂ ಶ್ರೀ ಶಾಲೆ’ (ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯಡಿ ಮೂರು ಹಂತಗಳಲ್ಲಿ ಜಿಲ್ಲೆಯ ಒಟ್ಟು 10 ಶಾಲೆಗಳು ಆಯ್ಕೆಯಾಗಿವೆ.
ದೇಶದಲ್ಲಿ ಒಟ್ಟು 14,500 ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ಕರ್ನಾಟಕದ 129 ಶಾಲೆಗಳನ್ನು ಆಯ್ಕೆ ಮಾಡಿತ್ತು. ಎರಡನೇ ಹಂತದಲ್ಲಿ ರಾಜ್ಯದ 245 ಶಾಲೆಗಳು ಪಿಎಂಶ್ರೀಗೆ ಆಯ್ಕೆಯಾಗಿವೆ. ಈಗ ಮೂರನೇ ಹಂತದಲ್ಲಿ 69 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಮೊದಲ ಹಂತದಲ್ಲಿ ಜಿಲ್ಲೆಯ ಯಾವುದೇ ಶಾಲೆ ಆಯ್ಕೆಯಾಗಿರಲಿಲ್ಲ. ಎರಡನೇ ಹಂತದಲ್ಲಿ ಏಳು ಹಾಗೂ ಮೂರನೇ ಹಂತದಲ್ಲಿ ಮೂರು ಶಾಲೆಗಳು ಅಭಿವೃದ್ಧಿಗೆ ಅವಕಾಶ ಪಡೆದುಕೊಂಡಿವೆ.
ಆಯ್ಕೆಯಾಗಿರುವ ಶಾಲೆಗಳ ಅಗತ್ಯ ಗಮನಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲೆಯಿಂದ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದ್ದು, ಅನುದಾನ ಬಿಡುಗಡೆಯಾಗಬೇಕಿದೆ. ಪ್ರತಿ ಶಾಲೆಗೆ ಕನಿಷ್ಠ ₹ 25 ಲಕ್ಷ ವರೆಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕಸ ನಿರ್ವಹಣೆ, ಮಳೆನೀರು ಕೊಯ್ಲು, ಸ್ಮಾರ್ಟ್ ತರಗತಿಗಳು, ಪೀಠೋಪಕರಣ, ಪ್ರಯೋಗಾಲಯ ವ್ಯವಸ್ಥೆ, ಸೌರಫಲಕ, ಡಿಜಿಟಲ್ ಗ್ರಂಥಾಲಯ, ಕಟ್ಟಡ ದುರಸ್ತಿ, ಬೋಧನೆಗೆ ಗಣಿತ, ವಿಜ್ಞಾನ ಕಿಟ್‌ಗಳು ಸೇರಿದಂತೆ ನೂರಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅನುದಾನ ಮಂಜೂರು ಆಗುತ್ತದೆ. ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
‘ಕೇಂದ್ರ ಸರ್ಕಾರದ ಈ ಯೋಜನೆಗೆ ರಾಜ್ಯ ಸರ್ಕಾರ ಕೂಡ ತನ್ನ ಪಾಲನ್ನು ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವೂ ಈ ಯೋಜನೆಯಲ್ಲಿ ಒಳಗೊಂಡಿದೆ. ಐದು ವರ್ಷಗಳ ಕಾರ್ಯಕ್ರಮ ಇದಾಗಿದ್ದು, ಪೂರ್ಣಗೊಳ್ಳುವ ವೇಳೆಗೆ ಮಗುವಿನ ಶಿಕ್ಷಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳು ಶಾಲೆಯಲ್ಲಿ ದೊರಕಲಿವೆ. ಇದರಿಂದ ದಾಖಲಾತಿ ಹೆಚ್ಚಳವೂ ಸಾಧ್ಯವಾಗಲಿದೆ’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಅಧಿಕಾರಿಯೊಬ್ಬರು ತಿಳಿಸಿದರು.
ಪಿಎಂ ಶ್ರೀ ಯೋಜನೆಯಲ್ಲಿ 3ನೇ ಹಂತದಲ್ಲಿ ಜಿಲ್ಲೆಯ 3 ಶಾಲೆ ಆಯ್ಕೆಯಾಗಿವೆ. ಮೂಲ ಸೌಕರ್ಯ ಹೆಚ್ಚಿಸುವುದು ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ
- ಕೃಷ್ಣಮೂರ್ತಿ ಡಿಡಿಪಿಐ
ಜಿಲ್ಲೆಯಿಂದ ‘ಪಿಎಂ ಶ್ರೀ’ಗೆ ಆಯ್ಕೆಯಾಗಿರುವ ಶಾಲೆಗಳು ಎರಡನೇ ಹಂತ (7 ಶಾಲೆ)
* ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಂಗಾರಪೇಟೆ
* ಮಾದಮಂಗಲ ಪ್ರಾಥಮಿಕ ಶಾಲೆ
* ಲಕ್ಕೂರು ಪ್ರಾಥಮಿಕ ಶಾಲೆ
* ನಂಗಲಿ ಪ್ರಾಥಮಿಕ ಶಾಲೆ
* ಗೌನಪಲ್ಲಿ ಪ್ರಾಥಮಿಕ ಶಾಲೆ
* ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸಪುರ
* ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೇತಮಂಗಲ
ಮೂರನೇ ಹಂತ (3 ಶಾಲೆ)
* ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಮಾಲೂರು
* ಬಳೆ ಚಂಗಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಳಬಾಗಿಲು
* ಹಿರಿಯ ಹಿರಿಯ ಪ್ರಾಥಮಿಕ ಪಾಠಶಾಲೆ ಕೆಂಬೋಡಿ (ಮೊದಲ ಹಂತದಲ್ಲಿ ಯಾವುದೇ ಶಾಲೆ ಆಯ್ಕೆಯಾಗಿರಲಿಲ್ಲ)
ಪೂರ್ವ ಪ್ರಾಥಮಿಕ ತರಗತಿಗೂ ಅವಕಾಶ
ಕೇಂದ್ರ ಸರ್ಕಾರದ ‘ಪಿಎಂಶ್ರೀ ಶಾಲೆ’ ಯೋಜನೆಯಡಿ ಆಯ್ಕೆಯಾಗಿರುವ ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ ಯುಕೆಜಿ) ನಡೆಸಲೂ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ತಾತ್ಕಾಲಿಕವಾಗಿ ತಲಾ ಒಬ್ಬ ಶಿಕ್ಷಕರು ಒಬ್ಬ ಆಯಾ ನೇಮಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.