ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ಉಳಿತಾಯ ಬಜೆಟ್‌ಗೆ ಅನುಮೋದನೆ

ತೆರಿಗೆ ಹೆಚ್ಚಳಕ್ಕೆ–ನಗರದ ಅಭಿವೃದ್ಧಿಗೆ ಸದಸ್ಯರ ಸಲಹೆ
Last Updated 31 ಮಾರ್ಚ್ 2022, 15:18 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಅಧ್ಯಕ್ಷೆ ಶ್ವೇತಾ ಅವರು ಗುರುವಾರ ಇಲ್ಲಿ ಮಂಡಿಸಿದ ₹ 2.94 ಕೋಟಿ ಮೊತ್ತದ ಉಳಿತಾಯ ಬಜೆಟ್‌ಗೆ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.

ತಮ್ಮ ಅಧಿಕಾರಾವಧಿಯ ಎರಡನೇ ಬಜೆಟ್‌ ಮಂಡಿಸಿದ ಶ್ವೇತಾ, ‘ಹಿಂದಿನ ಹಣಕಾಸು ವರ್ಷದಲ್ಲಿ ₹ 36.66 ಕೋಟಿ ಅಖೈರು ಶಿಲ್ಕು ಇದೆ. 2022–23ನೇ ಹಣಕಾಸು ವರ್ಷದಲ್ಲಿ ವಿವಿಧ ತೆರಿಗೆ ಹಾಗೂ ಆದಾಯ ಮೂಲಗಳಿಂದ ₹ 98.12 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಖೈರು ಶಿಲ್ಕು ಸೇರಿದಂತೆ ₹ 134.78 ಕೋಟಿ ಆದಾಯ ಸಂಗ್ರಹಣೆ ಗುರಿ ಇದೆ’ ಎಂದು ತಿಳಿಸಿದರು.

‘ಈ ಹಣಕಾಸು ವರ್ಷದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ನಿರೀಕ್ಷಿತ ಖರ್ಚು ₹ 131.84 ಕೋಟಿ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಖರ್ಚು ಕಳೆದು ₹ 2.94 ಕೋಟಿ ಉಳಿತಾಯದ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ನಗರದ ನೈರ್ಮಲ್ಯಕ್ಕೆ ₹ 4.85 ಕೋಟಿ, ಬೀದಿ ದೀಪ ನಿರ್ವಹಣೆ ಮತ್ತು ವಿದ್ಯುತ್ ಬಿಲ್ ಪಾವತಿಗೆ ₹ 4.20 ಕೋಟಿ, ಘನ ತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ ₹ 25.78 ಲಕ್ಷ, ಹೊಸ ರಸ್ತೆಗಳ ನಿರ್ಮಾಣಕ್ಕೆ ₹ 2.61 ಕೋಟಿ, ಹೊಸ ಚರಂಡಿ ಮತ್ತು ಮಳೆ ನೀರು ಚರಂಡಿಗಳ ನಿರ್ಮಾಣಕ್ಕೆ ₹ 6.59 ಕೋಟಿ, ಗೃಹಭಾಗ್ಯ ಯೋಜನೆಗೆ ₹ 2 ಕೋಟಿ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆಸ್ತಿ ತೆರಿಗೆಯಿಂದ ₹ 7.23 ಕೋಟಿ, ನಗರಸಭೆಯ ಮಳಿಗೆಗಳ ಬಾಡಿಗೆಯಿಂದ ₹ 64.15 ಲಕ್ಷ, ನೀರು ಬಳಕೆದಾರರ ಶುಲ್ಕದಿಂದ ₹ 98.18 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₹ 50 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಶುಲ್ಕದಿಂದ ₹ 55 ಲಕ್ಷ, ಜಾಹೀರಾತು ತೆರಿಗೆಯಿಂದ ₹ 7.68 ಲಕ್ಷ ಆದಾಯ ನಿರೀಕ್ಷಿಸಲಾಗಿದೆ’ ಎಂದು ವಿವರಿಸಿದರು.

‘ಸರ್ಕಾರದಿಂದ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ನಿಧಿಯಲ್ಲಿ ₹ 2.06 ಕೋಟಿ, ವೇತನ ಅನುದಾನದಿಂದ ₹ 5.66 ಕೋಟಿ, ವಿದ್ಯುತ್‌ ಅನುದಾನ ₹ 19.39 ಕೋಟಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ₹ 10 ಲಕ್ಷ, ಸ್ವಚ್ಛ ಭಾರತ್‌ ಮಿಷನ್‌ನಲ್ಲಿ ₹ 60 ಲಕ್ಷ, ಎಸ್‌ಎಫ್‌ಸಿ ಬರ ಪರಿಹಾರ ನಿಧಿಯಿಂದ ₹ 10 ಲಕ್ಷ, 14ನೇ ಮತ್ತು 15ನೇ ಹಣಕಾಸು ಯೋಜನೆಯಿಂದ ₹ 5.41 ಕೋಟಿ, ಅಮೃತ್‌ ಯೋಜನೆಯಿಂದ ₹ 7.50 ಕೋಟಿ, ಗೃಹ ಭಾಗ್ಯ ಯೋಜನೆಯಲ್ಲಿ ₹ 12 ಕೋಟಿ ಅನುದಾನ ನಿರೀಕ್ಷಿಸಲಾಗಿದೆ’ ಎಂದರು.

ತೆರಿಗೆ ಹೆಚ್ಚಿಸಿ: ‘ನಗರದ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನವನ್ನೇ ನೆಚ್ಚಿ ಕೂರಬಾರದು. ನಗರಸಭೆ ಆದಾಯ ಹೆಚ್ಚಿಸಲು ಸಾಕಷ್ಟು ಅವಕಾಶಗಳಿವೆ. ನಗರಸಭೆಯ ಪ್ರಮುಖ ಆದಾಯದ ಮೂಲಗಳಾದ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಮದ್ಯದಂಗಡಿಗಳಿಂದ ಕಾಲಕಾಲಕ್ಕೆ ಸಮರ್ಪಕವಾಗಿ ವಿವಿಧ ತೆರಿಗೆ ವಸೂಲಿ ಮಾಡಬೇಕು. ನೀರಿನ ತೆರಿಗೆ, ಘನತ್ಯಾಜ್ಯ ನಿರ್ವಹಣೆ ಶುಲ್ಕವನ್ನು ಹೆಚ್ಚಳ ಮಾಡಬೇಕು. ಇದರಿಂದ ನಗರಸಭೆಯ ಆದಾಯ ಹೆಚ್ಚುತ್ತದೆ’ ಎಂದು ಹಲವು ಸದಸ್ಯರು ಸಲಹೆ ನೀಡಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ಸೂಚನೆ ನೀಡಿ ಮಾತನಾಡಿ, ‘ಸದಸ್ಯರು ಸಭೆಯ ಗಾಂಭೀರ್ಯತೆ ಕಾಪಾಡಬೇಕು. ಒಬ್ಬ ಸದಸ್ಯ ಮಾತನಾಡುವಾಗ ಇಬ್ಬರು ಮೂವರು ಸದಸ್ಯರು ಎದ್ದು ನಿಂದು ಮಾತನಾಡುವುದು ಶೋಭೆಯಲ್ಲ. ಇದರಿಂದ ಯಾರು ಏನು ಮಾತನಾಡಿದರು ಎಂದು ಯಾರಿಗೂ ಅರ್ಥವಾಗುವುದಿಲ್ಲ. ಅಧ್ಯಕ್ಷರು ಮತ್ತು ಆಯುಕ್ತರು ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು’ ಎಂದು ಸೂಚಿಸಿದರು.

40 ಸಾವಿರ ಆಸ್ತಿಗಳು: ‘ನಗರಸಭೆ ವ್ಯಾಪ್ತಿಯಲ್ಲಿ 40 ಸಾವಿರ ಆಸ್ತಿಗಳಿವೆ. ಈ ಪೈಕಿ ಬೆರಳೆಣಿಕೆ ಆಸ್ತಿಗಳಿಗೆ ಮಾತ್ರ ದಾಖಲೆಪತ್ರಗಳಿವೆ. ಹಲವು ವಾರ್ಡ್‌ಗಳಲ್ಲಿ ಜನರು ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲ. ಆ ಜನರಿಗೆ ತೆರಿಗೆ ಎಂದರೆ ಏನೆಂದು ಗೊತ್ತಿಲ್ಲ. ತೆರಿಗೆ ಕಟ್ಟದ ಜನ ಎಲ್ಲಾ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ತೆರಿಗೆ ಕಟ್ಟುವವರಿಗೆ ಸವಲತ್ತು ಸಿಗುತ್ತಿಲ್ಲ’ ಎಂದು ಸದಸ್ಯ ಎಸ್‌.ಆರ್‌.ಮುರಳಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ತೆರಿಗೆ ಸಂಗ್ರಹಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯದ ಕಾರಣ ನಗರಸಭೆಗೆ ನಿರೀಕ್ಷಿತ ರೀತಿಯಲ್ಲಿ ಆದಾಯ ಬರುತ್ತಿಲ್ಲ. ಆದರೂ ಪ್ರತಿ ವರ್ಷ ಉಳಿತಾಯ ಬಜೆಟ್‌ ಮಂಡಿಸುತ್ತೀರಿ. ಜನರ ನಿರೀಕ್ಷೆಯಂತೆ ನಗರ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಜನರಿಗೆ ನಗರಸಭೆ ಮೇಲೆ ವಿಶ್ವಾಸ ಮೂಡುತ್ತದೆ. ಆಸ್ತಿ ತೆರಿಗೆ ಸಂಗ್ರಹಣೆ ಸಂಬಂಧ ಪ್ರತಿ ತಿಂಗಳು ಅಧಿಕಾರಿಗಳ ಸಭೆ ನಡೆಸಬೇಕು’ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡ, ಆಯುಕ್ತ ಪ್ರಸಾದ್, ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT