ಕೋಲಾರ: ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಯಲ್ಲಿ ಹಲವಾರು ಲೋಪಗಳು ಕಂಡುಬಂದಿದ್ದು, ತೇಪೆ ಹಚ್ಚಲು ಹೆಚ್ಚುವರಿಯಾಗಿ ಇನ್ನೂ ಸುಮಾರು ₹50 ಲಕ್ಷ ಬೇಕಾಗಿದೆಯಂತೆ.
ಈಗಾಗಲೇ ಟ್ರ್ಯಾಕ್ ನಿರ್ಮಾಣಕ್ಕೆ ನಿಗದಿಪಡಿಸಿದ ₹7 ಕೋಟಿ ಸಂಪೂರ್ಣ ಖರ್ಚಾಗಿರುವುದಾಗಿ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಕಂಪನಿಯವರು ಹೇಳುತ್ತಿದ್ದಾರೆ. ನಿಗದಿತ ಅನುದಾನದಲ್ಲಿ ಕಾಮಗಾರಿ ಏಕೆ ಮುಗಿಯಲಿಲ್ಲವೆಂದು ಕೆಲವರು ಆಕ್ಷೇಪವೆತ್ತಿದರು. ಆಗ ಗುತ್ತಿಗೆದಾರರು, ₹7 ಕೋಟಿ ವೆಚ್ಚದಲ್ಲಿ ಏನೇನು ಕೆಲಸ ಆಗಬೇಕಿತ್ತು ಅಷ್ಟನ್ನೇ ಮಾಡಲಾಗಿದೆ ಎಂದರು.
ಸಿಂಥೆಟಿಕ್ ಟ್ರ್ಯಾಕ್ ಪರಿಶೀಲಿಸಲು ಬುಧವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಕ್ರೀಡಾ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಆರ್.ಜಯರಾಂ ನೇತೃತ್ವದ ಸಮಿತಿಯವರು ಹಾಗೂ ಕ್ರೀಡಾ ಪರಿಣತರು ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ, ಬಹಳಷ್ಟು ಕಡೆ ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪ ತೆಗೆದಿದ್ದಾರೆ. ಕ್ರೀಡಾಂಗಣದಲ್ಲಿ ಹಲವು ಮಾರ್ಪಡು ಅಗತ್ಯವಿರುವುದರ ಜೊತೆಗೆ ಹೆಚ್ಚುವರಿ ಕೆಲಸ ನಡೆಯಬೇಕಿರುವುದನ್ನು ಗಮನಕ್ಕೆ ತಂದಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ಅಲ್ಲದೆ ಸಿವಿಲ್ ಕಾಮಗಾರಿಯಲ್ಲೂ ಎಡವಟ್ಟುಗಳು ಸಂಭವಿಸಿವೆ.
ಡಿಸ್ಕಸ್ ಥ್ರೋ, ಹ್ಯಾಮರ್ ಥ್ರೋ ಹಾಗೂ ಷಾಟ್‌ಪಟ್ (ಗುಂಡು ಎಸೆತ) ಚಟುವಟಿಕೆಗಳಿಗೆ ಅಳವಡಿಸಿರುವ ರಿಂಗ್ ಅಳವಡಿಕೆ ಅಸಂಬದ್ಧವಾಗಿರುವುದಾಗಿ ಸಮಿತಿಯವರು ತಿಳಿಸಿದರು. ಅಲ್ಲದೆ, ಸಿಂಥೆಟಿಕ್‌ಗೆ ಘಾಸಿಯಾಗದಂತೆ ಎಚ್ಚರಿಕೆಯಿಂದ ರಿಂಗ್ ತೆಗೆದು ನಿಗದಿತ ಸ್ಥಳದಲ್ಲಿ ಕ್ರಮಬದ್ಧವಾಗಿ ಅಳವಡಿಸುವಂತೆ ಸೂಚಿಸಿದರು. ಆ ಜಾಗದಲ್ಲಿ ಹೈಜಂಪ್‌ಗೆ ವ್ಯವಸ್ಥೆ ಮಾಡಬೇಕೆಂದರು.
ಕಾಮಗಾರಿ ಲೋಪಗಳ ಬಗ್ಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ರಾಜವೇಲು, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಕಾರ್ಯದರ್ಶಿ ರಾಜೇಶ್ ಬಾಬು, ಕ್ರೀಡಾ ಮಾರ್ಗದರ್ಶಕ ಹಾಗೂ ನಿವೃತ್ತ ಯೋಧ ಎಚ್.ಜಗನ್ನಾಥನ್ ಗಮನಕ್ಕೆ ತಂದರು. ಖೇಲೊ ಇಂಡಿಯಾ ಅಥ್ಲೆಟಿಕ್ ಕೋಚ್ ವಸಂತಕುಮಾರ್ ಕೂಡ ಕೆಲವೊಂದು ಲೋಪ ಗುರುತಿಸಿದರು. ಸ್ಥಳದಲ್ಲೇ ಇದ್ದ ಸಿಂಥೆಟಿಕ್ ಗುತ್ತಿಗೆದಾರರು ಹಾಗೂ ಸಿವಿಲ್ ಕಾಮಗಾರಿ ಗುತ್ತಿಗೆದಾರರೊಂದಿಗೆ ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ್ ಚರ್ಚಿಸಿದರು. ಕೊನೆಗೆ ಗುತ್ತಿಗೆದಾರರು ಲೋಪ ಸರಿಪಡಿಸಲು ಒಪ್ಪಿಕೊಂಡರು.
2023ರ ಜನವರಿ 26ರಂದು ಗಣರಾಜ್ಯೋತ್ಸವ ದಿನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎನ್.ಮುನಿರತ್ನ ಶಂಕುಸ್ಥಾಪನೆ ನೆರವೇರಿಸಿದ್ದರು. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಹಾಗೂ ಸಿವಿಲ್ ಕಾಮಗಾರಿ ಸೇರಿ ಒಟ್ಟು ₹ 8.55 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಮೂರು ಕಾಮಗಾರಿ ನಡೆಸಲು ಕ್ರೀಡಾ ಇಲಾಖೆಯ ಕೇಂದ್ರ ಕಚೇರಿ ಮೂಲಕ ಪ್ರತ್ಯೇಕವಾಗಿ ಟೆಂಡರ್ ಕೊಡಲಾಗಿತ್ತು.
ಪರಿಶೀಲನೆ ವೇಳೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಸೇರಿದಂತೆ ಸಮಿತಿ ಸದಸ್ಯರು, ಹೈದರಾಬಾದ್‌ನ ಮೂಲದ ಸಿಂಥೆಟಿಕ್ ಟ್ರ್ಯಾಕ್ ಗುತ್ತಿಗೆದಾರರು, ಸಿವಿಲ್ ಗುತ್ತಿಗೆದಾರರಾದ ಮುರಳಿ, ಮಂಜುನಾಥ್ ಇದ್ದರು.
ಆಯುಕ್ತ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ 400 ಮೀ. ಸಿಂಥೆಟಿಕ್ ಟ್ರ್ಯಾಕ್ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವಾರದಲ್ಲಿ ವರದಿ ನೀಡುವಂತೆ ಕ್ರೀಡಾ ಇಲಾಖೆ ಆಯುಕ್ತ ಆರ್.ಚೇತನ್ ಅಧಿಕಾರಿಗಳ ಸಮಿತಿಗೆ ಸೂಚನೆ ನೀಡಿದ್ದಾರೆ. ಈಚೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಕ್ರೀಡಾಂಗಣದ ಗುಣಮಟ್ಟವನ್ನು ತಜ್ಞರಿಂದ ಪರಿಶೀಲಿಸಿ ನ್ಯೂನತೆ ಸರಿಪಡಿಸಿ ಕ್ರೀಡಾಕೂಟ ಆಯೋಜಿಸಲು ಯೋಗ್ಯವಾಗಿದೆಯೇ ಎಂಬುದನ್ನು ದೃಢೀಕರಿಸುವಂತೆ ಕೋರಿದ್ದರು. ಹೀಗಾಗಿ ಈ ಸಮಿತಿ ರಚಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಬುಧವಾರ ಕ್ರೀಡಾಂಗಣಕ್ಕೆ ಭೇಟಿ ಸುದೀರ್ಘವಾಗಿ ಪರಿಶೀಲಿಸಿದರು.
ಸಿಂಥೆಟಿಕ್ ಟ್ರ್ಯಾಕ್‌ನ ಕೆಲವೆಡೆ ಮಳೆ ನೀರು ನಿಂತಿದೆ. ಪ್ರಮುಖವಾಗಿ ಷಾಟ್‌ಪಟ್ ರಿಂಗ್ ಹ್ಯಾಮರ್ ಥ್ರೋ ಹಾಗೂ ಡಿಸ್ಕಸ್ ಥ್ರೋ ರಿಂಗ್ ಜಲಾವೃತಗೊಂಡಿವೆ. ಅಲ್ಲದೇ ಲಾಂಗ್‌ಜಂಪ್ ಹಾಗೂ ಟ್ರಿಪಲ್ ಜಂಪ್‌ನ ರನ್‌ವೇ ಕಾಲುವೆಯಂತಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ರನ್‌ವೇನಲ್ಲಿ ನೀರು ನಿಂತಿದೆ. ಇನ್ನು ಲಾಂಗ್‌ಜಂಪ್ ಪಿಟ್‌ಗೆ ಹಾಕಿರುವ ಮರಳು ಮಳೆಯಿಂದ ಒದ್ದೆಯಾಗಿ ಕಾಂಕ್ರೀಟ್‌ನಂತಾಗಿದೆ.
ಸಿಂಥೆಟಿಕ್ ಟ್ರ್ಯಾಕ್ ಲೋಪಗಳನ್ನು ಸರಿಪಡಿಸಲು ಮತ್ತಷ್ಟು ಕಾಮಗಾರಿ ಅಗತ್ಯ ಇದೆ. ಆದರೆ ಆಗಸ್ಟ್ 15ರಂದು ಇಲ್ಲಿಯೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯುತ್ತಿರುವ ಕಾರಣ ಸದ್ಯಕ್ಕೆ ಕಾಮಗಾರಿ ಆರಂಭಿಸುತ್ತಿಲ್ಲ. ಬದಲಾಗಿ ಅಂದು ಸಿಂಥೆಟಿಕ್ ಟ್ರ್ಯಾಕ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಂದ ಚಾಲನೆ ಕೊಡಿಸಲಾಗುವುದು.
ಆ.20ರ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಕ್ರೀಡಾ ಇಲಾಖೆ ಸಹಾಯಕಿ ನಿರ್ದೇಶಕಿ ಗೀತಾ ತಿಳಿಸಿದರು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದಿದ್ದರೂ ಅಪೂರ್ಣವಾಗಿದೆ. ಉದ್ಘಾಟನೆ ಆಗದೇ ಕ್ರೀಡಾಪಟುಗಳಿಗೆ ಲಭ್ಯವೂ ಆಗುತ್ತಿಲ್ಲ. ಇನ್ನು ಎಷ್ಟು ದಿನ ಅಥ್ಲೀಟ್‌ಗಳು ಕಾಯಬೇಕು ಎಂದು ಕ್ರೀಡಾ ಪರಿಣತ ಹಾಗೂ ನಿವೃತ್ತ ಯೋಧ ಜಗನ್ನಾಥನ್ ಪ್ರಶ್ನಿಸಿದರು.
ಲೋಪ ಸರಿಪಡಿಸಲು ಅಗತ್ಯವಿರುವ ಸುಮಾರು ₹50 ಲಕ್ಷಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ಅಂದಾಜು ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲು ಸಮಿತಿ ಸದಸ್ಯರು ಚರ್ಚಿಸಿದರು. ಅಲ್ಲದೇ ಈ ಸಂಬಂಧ ಹಣ ಹೊಂದಿಸಲು ಶಾಸಕ ಕೊತ್ತೂರು ಮಂಜುನಾಥ್ ಜೊತೆ ಮಾತನಾಡಲೂ ನಿರ್ಧರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.