ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕೊರೆಯುವ ಚಳಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಮಧ್ಯರಾತ್ರಿ ಸಂವಾದ

ಸಿದ್ದರಾಮಯ್ಯ ರೋಡ್‌ ಶೋಗೆ ಎಚ್‌ಡಿಕೆ ರಥಯಾತ್ರೆ ಸವಾಲು!
Last Updated 22 ನವೆಂಬರ್ 2022, 6:04 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಜನರ ನಾಡಿ ಮಿಡಿತ ಅರಿಯಲು ವಾರದ ಹಿಂದೆಯಷ್ಟೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಸಂಚಲನ ಸೃಷ್ಟಿಸಿ ಹೋಗಿದ್ದರೆ, ಅವರಿಗೆ ಸವಾಲೆಸೆಯುವ ರೀತಿಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ರೋಡ್‌ ಶೋ ನಡೆಸಿದರು.

ಮುಂಬರುವ ಚುನಾವಣೆಗೆ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಜೆಡಿಎಸ್‌ ಪಂಚರತ್ನ ರಥಯಾತ್ರೆಯು ಬೆಳಿಗ್ಗೆಯಿಂದ ಸಂಜೆವರೆಗೆ ಕ್ಷೇತ್ರದ ವಕ್ಕಲೇರಿಯಿಂದ ಕ್ಯಾಲನೂರಿವರೆಗೆ ಸುಮಾರು 50 ಕಿ.ಮೀ ಕ್ರಮಿಸಿ 30ಕ್ಕೂ ಅಧಿಕ ಹಳ್ಳಿ ಹಾದು ಹೋಯಿತು. ಇದು ಒಕ್ಕಲಿಕರ ಪ್ರಾಬಲ್ಯವಿರುವ ಪ್ರದೇಶ ಕೂಡ.

ಹೋದಲೆಲ್ಲಾ ಹೂಮಳೆ, ಪೂರ್ಣಕುಂಭ ಸ್ವಾಗತ ಲಭಿಸಿತು. ಕ್ರೇನ್‌ಗಳಲ್ಲಿ ಸೇಬು ಹಾಗೂ ಹೂವಿನ ಮಾಲಾರ್ಪಣೆ ಮಾಡಿದರು. ವಿಶೇಷವೆಂದರೆ ಕೆಲವೆಡೆ ರೈತರು ಕ್ಯಾಪ್ಸಿಕಂ ಹಾಗೂ ಟೊಮೆಟೊದಿಂದ ನಿರ್ಮಿಸಿದ ಬೃಹತ್‌ ಹಾರ ಹಾಕಿದರು. ಹಗಲು ಸಾರ್ವಜನಿಕ ಸಭೆ ನಡೆಸಿ ರಾತ್ರಿ ಜನರೊಂದಿಗೆ ಸಂವಾದ ನಡೆಸಿದರು. ದಾರಿ ಮಧ್ಯೆ ಕಾಲೇಜು ವಿದ್ಯಾರ್ಥಿಗಳ ಸೆಲ್ಫಿಗೆ ಸಹಕರಿಸಿದರು.

ಶಿವಾರಪಟ್ಟಣದಲ್ಲಿ ಕೊರೆವ ಚಳಿಯ ನಡುವೆಯೇ ಮಧ್ಯ ರಾತ್ರಿ 12 ಗಂಟೆವರೆಗೆ ನಡೆದ ಸಂವಾದದ ವೇಳೆ ರೈತರ ಸಂಕಷ್ಟ ಆಲಿಸಿದರು. ಒಬ್ಬೊಬ್ಬರು ಒಂದೊಂದು ಸಮಸ್ಯೆ ಬಿಚ್ಚಿಟ್ಟರು. ವೃದ್ಧರು, ಮಹಿಳೆಯರು ನೋವು ಹೇಳಿಕೊಂಡರು.

ಕೋಲಾರ ತಾಲ್ಲೂಕಿನ ಛತ್ರಕೋಡಿಹಳ್ಳಿ ಗ್ರಾಮದ ರೈತ ಮುನಿಯಪ್ಪ ಅವರ ಪುತ್ರ ಅಶ್ವಿನ್‌ ಕುಮಾರ್‌ ಜೆಡಿಎಸ್‌ಗೆ ದೇಣಿಗೆಯಾಗಿ ₹ 25 ಸಾವಿರ ಮೊತ್ತದ ಚೆಕ್‌ ನೀಡಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮ ಕುಟುಂಬದ ₹ 1 ಲಕ್ಷ ಸಾಲ ಮನ್ನಾವಾಗಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.

ಎಚ್‌ಡಿಕೆಗೆ ಗಂಟಲು ಸಮಸ್ಯೆ

‘ಆರೋಗ್ಯ ಚೆನ್ನಾಗಿಯೇ ಇದೆ. ಆದರೆ, ನಿರಂತರ ತಿರುಗಾಡಿ, ಸಭೆಗಳಲ್ಲಿ ಮಾತನಾಡುತ್ತಿರುವುದರಿಂದ ಗಂಟಲಿನಲ್ಲಿ ಸಮಸ್ಯೆ ಇದೆ. ಪಂಚರತ್ನ ರಥಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಳೆದ 13ವರ್ಷಗಳಿಂದ ಪಟಾಕಿಯ ಹೊಗೆ, ದೂಳಿ ಕುಡಿದುಕೊಂಡು ಪಕ್ಷ ಕಟ್ಟುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT