ಬುಧವಾರ, ಜುಲೈ 28, 2021
28 °C

ಕೋಲಾರ: ಕೋಚಿಮುಲ್‌ ಜಮೀನು ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾಡಳಿತವು ತಾಲ್ಲೂಕಿನ ಹೊಳಲಿ ಗ್ರಾಮದ ಬಳಿ ಕೋಚಿಮುಲ್‌ಗೆ ಮಂಜೂರು ಮಾಡಿದ್ದ  ಸುಮಾರು 50 ಎಕರೆ ಜಮೀನಿನ ಒತ್ತುವರಿಯನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು.

ದಿವಂಗತ ಡಿ.ಕೆ.ರವಿ ಅವರು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದಾಗ ಕೋಚಿಮುಲ್‌ ಅಭಿವೃದ್ಧಿಗಾಗಿ ಕಂದಾಯ ಇಲಾಖೆಯ ಜಮೀನನ್ನು ಮಂಜೂರು ಮಾಡಿದ್ದರು. ಬಳಿಕ ಹೊಳಲಿಯ ಆವಳಪ್ಪ ಮತ್ತು ಬೈರಪ್ಪ ಎಂಬುವರು ಈ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು.

ಜಮೀನಿನ ಒತ್ತುವರಿ ತೆರವಿಗೆ ಕೋಚಿಮುಲ್‌ ಮೂರ್ನಾಲ್ಕು ಬಾರಿ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಕೋಚಿಮುಲ್ ಆಡಳಿತ ಮಂಡಳಿಯು ಸಭೆ ನಡೆಸಿ ಜಮೀನಿನ ಒತ್ತುವರಿ ತೆರವುಗೊಳಿಸುವ ಜವಾಬ್ದಾರಿಯನ್ನು ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ ಅವರಿಗೆ ಒಪ್ಪಿಸಿತ್ತು. ಹರೀಶ್‌ ಅವರು ಒತ್ತುವರಿದಾರರ ಮನವೊಲಿಸಿ ಜೆಸಿಬಿಗಳ ಮೂಲಕ ಒತ್ತುವರಿ ತೆರವು  ಮಾಡಿಸಿದರು.

‘ಜಿಲ್ಲಾಡಳಿತವು ಜಾನುವಾರು ಮೇವು ಬೆಳೆಯುವ ಉದ್ದೇಶಕ್ಕೆ ಕೋಚಿಮುಲ್‌ಗೆ ಜಮೀನು ಮಂಜೂರು ಮಾಡಿತ್ತು. ಆದರೆ, ಒಕ್ಕೂಟದ ಹಿಂದಿನ ಆಡಳಿತ ಮಂಡಳಿಯು ಜಮೀನು ಸದ್ಬಳಕೆಗೆ ಆಸಕ್ತಿ ತೋರಲಿಲ್ಲ. ಒತ್ತುವರಿದಾರರು ಪರಿಸ್ಥಿತಿಯ ಲಾಭ ಪಡೆದು ಜಮೀನು ಅತಿಕ್ರಮಿಸಿಕೊಂಡಿದ್ದರು’ ಎಂದು ಹರೀಶ್‌ ಸುದ್ದಿಗಾರರಿಗೆ ತಿಳಿಸಿದರು.

‘ಒಕ್ಕೂಟದ ಆಡಳಿತ ಮಂಡಳಿ ಸಭೆಗಳಲ್ಲೂ ಜಮೀನು ಒತ್ತುವರಿ ಕೇಳುವವರು ಇರಲಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರಿಗೆ ಇದು ಬೇಕಾಗಿರಲಿಲ್ಲ. ಅಧಿಕಾರಿಗಳು ಒತ್ತುವರಿ ತೆರವು ಮಾಡಿಸುವ ಧೈರ್ಯ ತೋರಿರಲಿಲ್ಲ. ಹೀಗಾಗಿ ಜಮೀನು ನಿಷ್ಪ್ರಯೋಜಕವಾಗಿತ್ತು’ ಎಂದು ಹೇಳಿದರು.

ಅಂತರ್ಜಲ ವೃದ್ಧಿ: ‘ಒತ್ತುವರಿ ತೆರವು ಮಾಡಿರುವ ಜಮೀನಿನಲ್ಲಿ ಮೇವು ಬೆಳೆಯಲು, ಒಕ್ಕೂಟಕ್ಕೆ ಅಗತ್ಯವಿರುವ ನೀರಿಗಾಗಿ ಹೊಸ ಕೊಳವೆ ಬಾವಿ ಕೊರೆಸಲು ಮತ್ತು ಸೌರ ವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಮೀನಿನ ಸ್ವಲ್ಪ ದೂರದಲ್ಲೇ ಕಾಲುವೆಯಲ್ಲಿ ಕೆ.ಸಿ ವ್ಯಾಲಿ ನೀರು ಹರಿದು ಹೋಗುತ್ತಿದ್ದು, ಅಂತರ್ಜಲ ಮಟ್ಟ ಸುಧಾರಿಸಿದೆ. ಈ ಭಾಗದಲ್ಲಿ ಕೊಳವೆ ಬಾವಿ ಕೊರೆದರೆ ಒಕ್ಕೂಟವು ಪ್ರತಿ ತಿಂಗಳು ನೀರು ಖರೀದಿಗಾಗಿ ಮಾಡುತ್ತಿರುವ ₹ 15 ಲಕ್ಷ ಖರ್ಚು ಉಳಿಯುತ್ತದೆ’ ಎಂದು ವಿವರಿಸಿದರು.

‘ಈ ಸಂಬಂಧ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಬೇಕು. ಖರ್ಚು ವೆಚ್ಚ ಕಡಿಮೆ ಮಾಡಿದರೆ ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿಪಡಿಬಹುದು’ ಎಂದು ಅಭಿಪ್ರಾಯಪಟ್ಟರು.

ಕೋಚಿಮುಲ್‌ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌, ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು