ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

18 ವರ್ಷಗಳ ಬಳಿಕ ವೈಎನ್‌ಎನ್‌ಗೆ ಸೋಲು!

ಕೋಲಾರ ಲೋಕಸಭೆ ಕ್ಷೇತ್ರ ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಶ್ರೀನಿವಾಸ್‌ ಗೆಲುವಿನ ಸಮಾಧಾನ
Published 8 ಜೂನ್ 2024, 7:45 IST
Last Updated 8 ಜೂನ್ 2024, 7:45 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸೋತು ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ದ್ವೈವಾರ್ಷಿಕ ಚುನಾವಣೆಯ ಗೆಲುವು ಸಮಾಧಾನ ತಂದಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಕೋಲಾರ ಸೇರಿದಂತೆ ಐದು ಜಿಲ್ಲೆಗಳು ಸೇರಿದ್ದು, ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಡಿ.ಟಿ.ಶ್ರೀನಿವಾಸ್‌ ಜಯ ಗಳಿಸಿದ್ದಾರೆ. ಅವರು 8,909 ಮತ ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 7,142 ಮತ ಗಿಟ್ಟಿಸಿಕೊಂಡಿದ್ದಾರೆ.

ಇದರೊಂದಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರಾದ ನಾರಾಯಣಸ್ವಾಮಿ ಅವರ 18 ವರ್ಷಗಳ ಪಾರುಪತ್ಯಕ್ಕೆ ತೆರೆಬಿದ್ದಿದೆ. ಮೊದಲ ಬಾರಿ ಪಕ್ಷೇತರರಾಗಿ ಗೆಲುವು ಸಾಧಿಸಿದ ಅವರು ನಂತರ ಬಿಜೆಪಿ ಸೇರಿದ್ದರು. 18 ವರ್ಷಗಳಿಂದ ಈ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದರು.

ನಾರಾಯಣಸ್ವಾಮಿ ಈ ಬಾರಿ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆಗಿದ್ದರು. ಈ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದ್ದು, ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು ಗೆದ್ದಿದ್ದಾರೆ. ನಾರಾಯಣಸ್ವಾಮಿ ಕೂಡ ಮತ್ತೊಂದು ಅವಧಿಗೆ ಗೆಲುವಿನ ವಿಶ್ವಾಸದಲ್ಲಿದ್ದರು. ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. ಆದರೆ, ಶಿಕ್ಷಕ ಮತದಾರರು ಕೈಕೊಟ್ಟಿದ್ದಾರೆ. 

ಇತ್ತ ಶ್ರೀನಿವಾಸ್‌ ಅವರಿಗೆ ದೊರೆತ ಚೊಚ್ಚಲ ಗೆಲುವು ಇದಾಗಿದೆ. ಅವರು ಬಿಜೆಪಿ ಭದ್ರಕೋಟೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. 2020ರಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರು ಹಾಗೂ ಪತ್ನಿ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಈಚೆಗೆ ಕಾಂಗ್ರೆಸ್‌ಗೆ ಸೇರಿದ್ದರು. ಶ್ರೀನಿವಾಸ್‌ ಅವರಿಗೆ ಟಿಕೆಟ್‌ ಲಭಿಸಿತ್ತು. ಇಬ್ಬರೂ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಜೊತೆಗೆ ಸ್ಥಳೀಯ ಕಾಂಗ್ರೆಸ್‌ ಶಾಸಕರು ಶಾಲಾ ಕಾಲೇಜುಗಳಿಗೆ ತೆರಳಿ ಮತಯಾಚನೆ ಮಾಡಿದ್ದರು.

ಕೋಲಾರ ಜಿಲ್ಲೆಯಲ್ಲಿ 2,392 ಪುರುಷರು, 2,158 ಮಹಿಳೆಯರು ಸೇರಿದಂತೆ ಒಟ್ಟು 4,550 ಮತದಾರರು ಇದ್ದರು. ಅವರಲ್ಲಿ 2,297 ಪುರುಷರು, 2,063 ಮಹಿಳೆಯರು ಸೇರಿದಂತೆ ಒಟ್ಟು 4,360 ಮಂದಿ ಮತದಾನ (ಶೇ 95.82) ಮಾಡಿದ್ದರು. ಐದು ಜಿಲ್ಲೆಗಳಿಂದ ಸೇರಿ ಒಟ್ಟು 25,309 ಮತಗಳಿದ್ದವು.

ಪಕ್ಷೇತರ ಅಭ್ಯರ್ಥಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಘದ (ರುಪ್ಸ ಕರ್ನಾಟಕ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ವಿನೋದ್‌ ಶಿವರಾಜ್‌ ಸೇರಿದಂತೆ 15 ಮಂದಿ ಕಣದಲ್ಲಿದ್ದರು.

ವೈ.ಎ.ನಾರಾಯಣಸ್ವಾಮಿ
ವೈ.ಎ.ನಾರಾಯಣಸ್ವಾಮಿ

ಬಿಜೆಪಿ ಭದ್ರಕೋಟೆ ಭೇದಿಸಿದ ಕಾಂಗ್ರೆಸ್‌ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 704 ಮತಗಳು ತಿರಸ್ಕೃತ ಕೋಲಾರ ಜಿಲ್ಲೆಯಲ್ಲಿದ್ದ 4,550 ಶಿಕ್ಷಕ ಮತದಾರರು, ಮತದಾನವಾಗಿದ್ದ ಪ್ರಮಾಣ ಶೇ 95.82

ಇಬ್ಬರಿಗೂ ಭಯ ತಂದಿದ್ದ ವಿನೋದ್‌! ಪಕ್ಷೇತರ ಸ್ಪರ್ಧಿಯಾಗಿದ್ದ ವಿನೋದ್‌ ಶಿವರಾಜ್‌ ಪ್ರಚಾರ ನಡೆಸಿದ ರೀತಿ ಹಾಗೂ ಕಸರತ್ತು ಗಮನಿಸಿದರೆ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹೊಡೆತ ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಅದರಂತೆ ಗೆಲ್ಲಲು ಸಾಧ್ಯವಾಗದಿದ್ದರೂ ಅವರು ಪಡೆದ ಮತಗಳು ಇಬ್ಬರೂ ಅಭ್ಯರ್ಥಿಗಳಿಗೆ ಆತಂಕ ಸೃಷ್ಟಿಸಿದ್ದವು. ಆದರೆ ಅವರು ಪಡೆದ ಮತಗಳು ಬಿಜೆಪಿಗೆ ಹೆಚ್ಚು ಪೆಟ್ಟು ನೀಡಿದ್ದು ಕಾಂಗ್ರೆಸ್‌ಗೆ ವರದಾನವಾಗಿ ಪರಿಣಮಿಸಿದೆ ಎನ್ನಲಾಗಿದೆ.

- ‘ಈ ಗೆಲುವು ಶಿಕ್ಷಕರದ್ದು’ ತಮ್ಮ ನೂರಾರು ಕೆಲಸ ಬದಿಗೊತ್ತಿ ನನ್ನನ್ನು ಗೆಲ್ಲಿಸಲು ಸಂಕಲ್ಪ ಮಾಡಿ ಹಗಲಿರುಳು ಕೆಲಸ ಮಾಡಿದ ಎಲ್ಲಾ ಶಿಕ್ಷಕರು ಉಪನ್ಯಾಸಕರು ಸ್ವಯಂಸೇವಕರು ಹಾಗೂ ಮತದಾನ ಮಾಡಿದ ಎಲ್ಲಾ ಶಿಕ್ಷಕರು ಉಪನ್ಯಾಸಕರಿಗೆ ಧನ್ಯವಾದಗಳು. ಇದು ಶಿಕ್ಷಕರ ಗೆಲುವು ಡಿ.ಟಿ.ಶ್ರೀನಿವಾಸ್‌ ವಿಧಾನ ಪರಿಷತ್‌ ಸದಸ್ಯ ಆಗ್ನೇಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್‌

‘ಮುಂದೆಯೂ ಸಹಕಾರ ಇರಲಿದೆ’ ಎರಡು ದಶಕಗಳ ಕಾಲ ಶಿಕ್ಷಕರ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಮುಂದೆಯೂ ನನ್ನ ಬೆಂಬಲ ಮತ್ತು ಸಹಕಾರ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಇರಲಿದೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ಶಿಕ್ಷಣ ಕ್ಷೇತ್ರವನ್ನು ಪಾವಿತ್ರ್ಯಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ವೈ.ಎ.ನಾರಾಯಣಸ್ವಾಮಿ ಪರಾಜಿತ ಅಭ್ಯರ್ಥಿ ಆಗ್ನೇಯ ಶಿಕ್ಷಕರ ಕ್ಷೇತ್ರ  ಬಿಜೆಪಿ

ಐದು ಜಿಲ್ಲೆ 34 ತಾಲ್ಲೂಕು ವ್ಯಾಪ್ತಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಚಿತ್ರದುರ್ಗ ಸೇರಿದಂತೆ ದಾವಣಗೆರೆ ( ದಾವಣಗೆರೆ ಹರಿಹರ ಜಗಳೂರು) ಸೇರಿದಂತೆ ಒಟ್ಟು 5 ಜಿಲ್ಲೆಗಳ 34 ತಾಲ್ಲೂಕುಗಳ ಬರುತ್ತವೆ. ಸುಮಾರು 466 ಕಿ.ಮೀ ಸುತ್ತಳತೆ ಹೊಂದಿದೆ. ಈ ಜಿಲ್ಲೆಗಳ 15820 ಪುರುಷರು 9489 ಮಹಿಳೆಯರು ಸೇರಿ ಒಟ್ಟು 25309 ಮತದಾರರು ಈ ಬಾರಿ ನೋಂದಣಿ ಮಾಡಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT