ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

ಕಾಯ್ದೆಯ ಪ್ರತಿ ಸುಟ್ಟು ಕೆಪಿಆರ್‌ಎಸ್‌ ಸದಸ್ಯರ ಪ್ರತಿಭಟನೆ
Last Updated 11 ಜೂನ್ 2020, 15:17 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳ ಜತೆ ವಿಲೀನಗೊಳಿಸುವ ಸುಗ್ರೀವಾಜ್ಞೆ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಗುರುವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನವ ಉದಾರವಾದಿ ಆರ್ಥಿಕ ಧೋರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ’ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಾಯ್ದೆಯ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಇತರೆ ವರ್ಗದ ಜನರಿಗೆ ಸಾಲದ ಯೋಜನೆ ರೂಪಿಸಿಲ್ಲ. ಕೃಷಿ ಉತ್ಪನ್ನ ಮಾರಾಟ, ವಾಣಿಜ್ಯ ಹಾಗೂ ಬೆಲೆ ಖಾತರಿ, ಕೃಷಿ ಸೇವೆ ಕುರಿತ ರೈತರ ಒಪ್ಪಂದ ಸುಗ್ರೀವಾಜ್ಞೆಯನ್ನು ಸಚಿವ ಸಂಪುಟ ಅನುಮೋದಿಸಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ದೂರಿದರು.

‘ಕೇಂದ್ರವು ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಸರ್ಕಾರದ ಸುಗ್ರೀವಾಜ್ಞೆಗಳು ರೈತರಿಗೆ, ಕೃಷಿ ಕೂಲಿಕಾರರಿಗೆ ಪ್ರತಿಗಾಮಿಯಾಗಿವೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯು ಹರಾಜು ವ್ಯವಸ್ಥೆ ಪರಿಚಯಿಸಿದ್ದರಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿತ್ತು. ಇದೀಗ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರ ಹಿತಕ್ಕೆ ವಿರುದ್ಧವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಜಾರಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್‌ ಕಂಪನಿಗಳ ಹಿತರಕ್ಷಣೆಗಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ನೂತನ ಎಪಿಎಂಸಿ ವ್ಯವಸ್ಥೆಯಲ್ಲಿ ರೈತರು ಲಾಭದಾಯಕ ದರ ಪಡೆಯಲು ಸಾಧ್ಯವಿಲ್ಲ. ಬೆಂಬಲ ಬೆಲೆ ಮುಂದೆ ಅಸ್ತಿತ್ವ ಕಳೆದುಕೊಳ್ಳುತ್ತದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಸರ್ಕಾರ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷ ವಿ.ಅಂಬರೀಷ್, ಸದಸ್ಯರಾದ ಗಂಗಮ್ಮ, ವೆಂಕಟೇಶ್, ಟಿ.ಕೃಷ್ಣೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT