ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ರವಾನೆ
ಮರು ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗುತ್ತದೆ. ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣಾಧಿಕಾರಿಯು ಫಲಿತಾಂಶ ಪ್ರಕಟಿಸಿಲ್ಲ.
ಕೋಲಾರದಲ್ಲಿ ಮಂಗಳವಾರ ನಡೆದ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ವೇಳೆ ಪೊಲೀಸರ ಕಾವಲು
ಕೋಲಾರದ ಟಮಕ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಚಲನವಲನಕ್ಕೆ ನಿರ್ಬಂಧ ವಿಧಿಸಿದ್ದ ಪೊಲೀಸರು
ಬಿಗಿ ಭದ್ರತೆಯಲ್ಲಿ ಮರು ಮತ ಎಣಿಕೆ
ಮರು ಮತ ಎಣಿಕೆಗೆ ಹಿಂದೆಂದೂ ಕಾಣದಷ್ಟು ಭದ್ರತೆ ಒದಗಿಸಲಾಗಿತ್ತು. ಎಣಿಕೆ ಕೇಂದ್ರ ತೋಟಗಾರಿಕೆ ಮಹಾವಿದ್ಯಾಲಯದಿಂದ 1 ಕಿ.ಮೀ ವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆ ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿತ್ತು. 5 ಕಿ.ಮೀ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳ ಬಾಗಿಲು ಮುಚ್ಚಿಸಲಾಗಿತ್ತು. ಪೊಲೀಸರು ಬೆಂಗಳೂರು-ತಿರುಪತಿ ಹೆದ್ದಾರಿಯ ಸರ್ವಿಸ್ ರಸ್ತೆಯ ಉದ್ದಕ್ಕೂ ಬ್ಯಾರಿಕೇಡ್ ಹಾಕಿ ವಾಹನ ತಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್ ಜಗದೀಶ್ ಡಿವೈಎಸ್ಪಿಗಳಾದ ಎಂ.ಎಚ್.ನಾಗ್ತೆ ಮನಿಷಾ ಸರ್ಕಲ್ ಇನ್ ಸ್ಪೆಕ್ಟರ್ ಗಳು ವಿವಿಧ ಠಾಣೆಗಳ ಇನ್ ಸ್ಪೆಕ್ಟರ್ ಗಳು ಪಿಎಸ್ಐಗಳು ಭದ್ರತೆ ಒದಗಿಸಿದ್ದರು.
ಮತ ಎಣಿಕೆ ಕೇಂದ್ರದ ಸಮೀಪ ಸೇರಿದ್ದ ಮುಖಂಡರು ಕಾರ್ಯಕರ್ತರು
ಎಣಿಕೆ ಕೇಂದ್ರಕ್ಕೆ ಮಾಧ್ಯಮದವರಿಗೆ ನಿರ್ಬಂಧ
ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿತ್ತು. ಕೇಂದ್ರದ ಪ್ರಮುಖ ದ್ವಾರದಲ್ಲಿಯೇ ತಡೆಯಲಾಯಿತು. ಫಲಿತಾಂಶ ಬಹಿರಂಗಪಡಿಸದೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿರುವುದರಿಂದ ಈ ಕ್ರಮ ವಹಿಸಿರುವುದು ಗೊತ್ತಾಗಿದೆ. 'ಎಣಿಕಾ ಕೇಂದ್ರಕ್ಕೆ ಮಾಧ್ಯಮ ಸ್ನೇಹಿತರನ್ನು ಅನುಮತಿಸುವ ಸಂಬಂಧ ಸತತ ಪ್ರಯತ್ನದ ಹೊರತಾಗಿಯೂ ನವದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮಾಧ್ಯಮ ಚಟುವಟಿಕೆಗಳನ್ನು ಎಣಿಕೆ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿರುತ್ತಾರೆ' ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ. ಹೀಗಾಗಿ ಮಾಧ್ಯಮದವರು ರಾಷ್ಟ್ರೀಯ ಹೆದ್ದಾರಿ ಬದಿ ಕೂರಬೇಕಾಯಿತು.
ಮತ ಎಣಿಕೆ ಕೇಂದ್ರದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಏಜೆಂಟರ ಮೊಬೈಲ್ ಪಡೆದು ಒಳಗೆ ಕಳಿಸಿದ ಪೊಲೀಸರು
ಹೆದ್ದಾರಿ ಉದ್ದಕ್ಕೂ ಜನಸಾಗರ
ಮತ ಎಣಿಕೆ ಆರಂಭವಾದಾಗ ಟಮಕದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನಸಾಗರವೇ ಸೇರಿತ್ತು. ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರು ಬ್ಯಾರಿಕೇಡ್ ಅಡ್ಡಹಾಕಿ ತಡೆದು ಚದುರಿಸಲು ಪ್ರಯತ್ನಿಸಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಎಚ್ಚರಿಸಿದರು. ಮಧ್ಯಾಹ್ನದೊಳಗೆ ಎಣಿಕೆ ಕಾರ್ಯ ಮುಗಿಯಬಹುದೆಂದ ಭಾವಿಸಿದ್ದರು. ಆದರೆ ಸಂಜೆಯಾದರೂ ಮುಗಿಯುವ ಲಕ್ಷಣ ಕಾಣದ ಕಾರಣ ನಿಧಾನವಾಗಿ ಸ್ಥಳದಿಂದ ಕಾಲ್ಕಿತ್ತರು.
ಮತ ಎಣಿಕೆ ಕೇಂದ್ರದ ಬಳಿ ಸೇರಿದ್ದ ಜನರನ್ನು ಚದುರಿಸಿದ ಪೊಲೀಸರು