ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: 137 ಸರ್ಕಾರಿ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ

ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ತಾಲ್ಲೂಕುವಾರು ಅತಿಥಿ ಶಿಕ್ಷಕರ ಹಂಚಿಕೆ
Published 27 ಆಗಸ್ಟ್ 2023, 8:30 IST
Last Updated 27 ಆಗಸ್ಟ್ 2023, 8:30 IST
ಅಕ್ಷರ ಗಾತ್ರ

ಕೋಲಾರ: 2023–24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವರ್ಗಾವಣೆ ನಂತರ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು 2ನೇ ಹಂತದಲ್ಲಿ ನೇಮಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ನಿರ್ದೇಶಿಸಿದೆ.

ಈ ನಿಟ್ಟಿನಲ್ಲಿ ಜಿಲ್ಲೆಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ 30 ಮತ್ತು ಪ್ರೌಢಶಾಲೆ ವಿಭಾಗದಲ್ಲಿ 69 ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಹಂತ ಸೇರಿ ಕ್ರಮವಾಗಿ ಒಟ್ಟು 529 ಹಾಗೂ 248 ಅತಿಥಿ ಶಿಕ್ಷಕರನ್ನು ನಿಯೋಜಿಸಿದಂತಾಗಿದೆ. ಆದಾಗ್ಯೂ ಶಿಕ್ಷಕರ ಕೊರತೆ ಕಾಡುತ್ತಿದೆ. 

ಎರಡನೇ ಹಂತದ ಅತಿಥಿ ಶಿಕ್ಷಕರನ್ನು ವಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಇಲಾಖೆಯ ಆಯುಕ್ತರಾದ ಬಿ.ಬಿ.ಕಾವೇರಿ ಅವರು ಡಿಡಿಪಿಐಗೆ ಸೂಚಿಸಿದ್ದು, ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆ ಮಾಡಲು ಹೇಳಿದ್ದಾರೆ.

‘ಪ್ರಾಥಮಿಕ ವಿಭಾಗದಲ್ಲಿ 60 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಈಗ 30 ಅತಿಥಿ ಶಿಕ್ಷಕರನ್ನು ನೀಡಿದ್ದಾರೆ. ಅಷ್ಟರಲ್ಲೇ ನಿರ್ವಹಣೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಡಿಡಿಪಿಐ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಂಬಂಧ ಇಲಾಖೆಗೆ ಪತ್ರ ಬರೆದಿದ್ದೇವೆ. ಕೆಲ ಬ್ಲಾಕ್‌ಗಳಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರು ಸಿಗುತ್ತಿಲ್ಲ. ಉದಾಹರಣೆಗೆ ವಿಜ್ಞಾನ ವಿಷಯದಲ್ಲಿ ಪರಿಣತಿ ಹೊಂದಿದವರು ಸಿಗುತ್ತಿಲ್ಲ’ ಎಂದರು.

‘ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಕೋಲಾರ ವಿಭಾಗಗಳಿಗೆ ಹೆಚ್ಚೇನೂ ಅತಿಥಿ ಶಿಕ್ಷಕರ ಅಗತ್ಯವಿಲ್ಲ. ಕೆಜಿಎಫ್‌ ಹಾಗೂ ಬಂಗಾರಪೇಟೆ ಬ್ಲಾಕ್‌ಗೆ ಹೆಚ್ಚಿನ ಅತಿಥಿ ಶಿಕ್ಷಕರ ಅಗತ್ಯವಿತ್ತು. ಮಾಲೂರು 8 ಶಿಕ್ಷಕರನ್ನು ಕೇಳಿದ್ದು, 5 ಸಿಕ್ಕಿದೆ’ ಎಂದು ಹೇಳಿದರು.

ಆಯಾ ಬ್ಲಾಕ್‌ಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆಗಳಲ್ಲಿ, ಏಕೋಪಾಧ್ಯಾಯ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಭರ್ತಿಗೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ₹ 10,500 (ಪ್ರೌಢಶಾಲೆ) ಹಾಗೂ ₹ 10,000 (ಪ್ರಾಥಮಿಕ ಶಾಲೆ) ಗೌರವಧನ ದೊರೆಯಲಿದೆ. ಜಿಲ್ಲೆಯಲ್ಲಿ ಒಟ್ಟು 137 ಸರ್ಕಾರಿ ಪ್ರೌಢಶಾಲೆಗಳಿವೆ.

ಜಿಲ್ಲೆಯಲ್ಲಿವೆ 137 ಸರ್ಕಾರಿ ಪ್ರೌಢಶಾಲೆ ಕೆಜಿಎಫ್‌, ಬಂಗಾರಪೇಟೆ ಬ್ಲಾಕ್‌ಗೆ ಕಡಿಮೆ ಹಂಚಿಕೆ ತಾತ್ಕಾಲಿಕ ನಿಯೋಜನೆ
ಪ್ರಾಥಮಿಕ ಶಾಲೆಗಳಿಗೆ ಮತ್ತಷ್ಟು ಅತಿಥಿ ಶಿಕ್ಷಕರ ನಿಯೋಜನೆ ಅಗತ್ಯವಿದೆ. ಈಗ ಸಿಕ್ಕಿರುವುದು ಸಾಕಾಗುವುದಿಲ್ಲ. ಸದ್ಯಕ್ಕೆ ಇದರಲ್ಲೇ ನಿರ್ವಹಣೆ ಮಾಡುತ್ತೇವೆ
ಕೃಷ್ಣಮೂರ್ತಿ ಡಿಡಿಪಿಐ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT