ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರಕ್ಕೆ ದಾಖಲೆಯ ಮತದಾನ ಶ್ರೇಯ

ಲೋಕಸಭೆ ಚುನಾವಣೆ: ಅತಿ ಹೆಚ್ಚು ಮತದಾನದಲ್ಲಿ ಕೋಲಾರ ಮೀಸಲು ಕ್ಷೇತ್ರಕ್ಕೆ ಎರಡನೇ ಸ್ಥಾನ
Published 28 ಏಪ್ರಿಲ್ 2024, 6:18 IST
Last Updated 28 ಏಪ್ರಿಲ್ 2024, 6:18 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಹೆಚ್ಚಳಕ್ಕೆ ಸತತ ಮೂರು ತಿಂಗಳಿಂದ ನಡೆದಿದ್ದ ಜಾಗೃತಿ ಪ್ರಯತ್ನ, ವಿಭಿನ್ನ ಪ್ರಯೋಗ ಫಲ ನೀಡಿವೆ. ಜೊತೆಗೆ ಇನ್ನಿತರ ‘ಲೆಕ್ಕಾಚಾರ’ಗಳು ಕೂಡ ಮತದಾರರನ್ನು ಮತಗಟ್ಟೆಯತ್ತ ಸೆಳೆದಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಾರಿ ಶೇ 78.27ರಷ್ಟು ಮತದಾನವಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ಪ್ರಮಾಣದ ಮತದಾನವಾಗಿರಲಿಲ್ಲ. 2019ರಲ್ಲಿ ಶೇ 77.15 ಮತದಾನವಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಈ ಬಾರಿ ಬಿಸಿಲ ಧಗೆಯ ನಡುವೆಯೂ ದಾಖಲೆ ಮತದಾನ ನಡೆದಿರುವುದು ಮತದಾರರ ಉತ್ಸಾಹ ತೋರಿಸುತ್ತದೆ. ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 17,26,914 ಮತದಾರರಲ್ಲಿ 13,51,646 ಮಂದಿ ಮತದಾನ ಮಾಡಿದ್ದಾರೆ. ಗೆಲ್ಲುವ ಅಭ್ಯರ್ಥಿ ಯಾರೆಂಬ ಕುತೂಹಲ ಹೆಚ್ಚಿದ್ದು, ಜೂನ್‌ 4ವರೆಗೆ ಕಾಯಬೇಕು.

ಕಾಂಗ್ರೆಸ್‌ ಪಕ್ಷದ ಕೆ.ವಿ.ಗೌತಮ್‌ ಹಾಗೂ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಎಂ.ಮಲ್ಲೇಶ್‌ ಬಾಬು ಸೇರಿದಂತೆ ಒಟ್ಟು 18 ಅಭ್ಯರ್ಥಿಗಳ ‘ಭವಿಷ್ಯ’ ಈಗಾಗಲೇ ಮತಪೆಟ್ಟಿಗೆ ಸೇರಿದೆ.

ಎಂಟು ವಿಧಾನಸಭೆ ಕ್ಷೇತ್ರಗಳಿಂದ ಸೇರಿ ಒಟ್ಟು 2,060 ಮತಗಟ್ಟೆಗಳಿದ್ದು, ಮತದಾನ ಪ್ರಮಾಣ ಎಲ್ಲಾ ಕಡೆ ಶೇ 70 ದಾಟಿರುವುದು ವಿಶೇಷ. ಮಾಲೂರು (ಶೇ 84.23) ಅತ್ಯಧಿಕ ಮತದಾನವಾಗಿದ್ದರೆ, ಕೆಜಿಎಫ್‌ (ಶೇ 71.25) ಹಾಗೂ ಮುಳಬಾಗಿಲು (ಶೇ 76.19) ಅತಿ ಕಡಿಮೆ ಮತದಾನವಾಗಿದೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್‌ ಸಮಿತಿಯಿಂದ ಸತತ ಮನವೊಲಿಕೆ ಹಾಗೂ ಮತದಾರರ ಜವಾಬ್ದಾರಿ ಫಲವಾಗಿ ಈ ಸಾಧನೆ ಹೊರಹೊಮ್ಮಿದೆ. ಈ ಮೂಲಕ ರಾಜ್ಯದಲ್ಲಿ ನಡೆದ 14 ಕ್ಷೇತ್ರಗಳ ಪೈಕಿ ಎರಡನೇ ಅತಿ ಹೆಚ್ಚು ಮತದಾನ ಶ್ರೇಯಕ್ಕೆ ಪಾತ್ರವಾಗಿದೆ. ಮಂಡ್ಯ ಕ್ಷೇತ್ರ (ಶೇ 81.67) ಮೊದಲ ಸ್ಥಾನದಲ್ಲಿದೆ.

‘ಪ್ರಜಾತಂತ್ರ ಹಬ್ಬ’ದಲ್ಲಿ ಹಿರಿಯ ಹಾಗೂ ಕಿರಿಯ ಮತದಾರರು ಉತ್ಸಾಹದಿಂದ ಭಾಗಿಯಾದರು. ನಡೆಯಲೂ ಸಾಧ್ಯವಾಗದ ವಯೋವೃದ್ಧರು, ಅಂಗವಿಕಲರು ತಮ್ಮ ಜವಾಬ್ದಾರಿ ಮಾತ್ರ ಮರೆಯಲಿಲ್ಲ. ಇವರಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶವಿದ್ದರೂ ಹೆಚ್ಚಿನವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪ್ರಮುಖವಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷೆಯೂ ಆಗಿರುವ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಕೆಜಿಎಫ್‌ ಎಸ್ಪಿ ಕೆ.ಎಂ.ಶಾಂತರಾಜು ಹಾಗೂ ಚುನಾವಣಾ ಶಾಖೆಯ ಎಲ್ಲಾ ಸಿಬ್ಬಂದಿ ಶ್ರಮಿಸಿದ್ದಾರೆ.

ವೈವಿಧ್ಯಮಯ ಪೋಸ್ಟರ್‌, ಪೋಷಕರಿಗೆ ಮಕ್ಕಳ ಪತ್ರದ ಮೂಲಕ ಹಾಗೂ ವಿಡಿಯೋ ಮಾಡಿ ಮತದಾನ ಜಾಗೃತಿ ಮೂಡಿಸಲಾಯಿತು. ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಪಂಚಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕೆಎಸ್‌ಆರ್‌ಟಿಸಿ ಟಿಕೆಟ್‌, ಹಾಲಿನ ಪೊಟ್ಟಣದ ಮೇಲೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ಮದುವೆ ಕಾರ್ಡ್‌ ರೀತಿ ಆಹ್ವಾನ ಪತ್ರಿಕೆ ಮುದ್ರಿಸಿ ಮತದಾನಕ್ಕೆ ಮನೆಮನೆಗೆ ಕರೆಯೋಲೆ ಕಳುಹಿಸಲಾಗಿತ್ತು.

ಇದಕ್ಕೆ ಪ್ರೇರಣೆ ನೀಡುವಂತೆ ಜಿಲ್ಲೆಯ ವಿವಿಧೆಡೆ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಖಿ ಮತಗಟ್ಟೆಗಳು ಅಲ್ಲದೇ, ಅಂಗವಿಕಲ ಸ್ನೇಹಿ, ಹೊಸ ಮತದಾರ ಸ್ನೇಹಿ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು.

ಕಳೆದ ಬಾರಿ ಎಲ್ಲೆಲ್ಲಿ ಕಡಿಮೆ ಮತದಾನ ಆಗಿದೆಯೋ ಅಲ್ಲಿಗೆ ತೆರಳಿ ಮತದಾರರ ಮನವೊಲಿಸುವ ಕೆಲಸ ಮಾಡಿರುವುದಾಗಿ ಪದ್ಮಾ ಬಸವಂತಪ್ಪ ತಿಳಿಸಿದ್ದರು.

1952ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಕಡಿಮೆ ಪ್ರಮಾಣದ (ಶೇ 48.43) ಮತದಾನವಾಗಿತ್ತು. ಮೊದಲೆರಡು ಚುನಾವಣೆಗಳು ದ್ವಿಸದಸ್ಯ ಸ್ಥಾನಗಳಿದ್ದವು. ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ ಶೇ 69.15 ಮತದಾನ ನಡೆದಿತ್ತು. ಆದರೆ, 2014ರ ಚುನಾವಣೆ (ಶೇ 75.51) ಹಾಗೂ 2019ರ ಚುನಾವಣೆಯಲ್ಲಿ (ಶೇ 77.15) ಸ್ವೀಪ್‌ ಸಮಿತಿ ಪ್ರಯತ್ನದಿಂದ ಮತದಾನ ಪ್ರಮಾಣ ಏರಿಕೆ ಕಂಡಿತ್ತು.

ಅಕ್ರಂ ಪಾಷಾ
ಅಕ್ರಂ ಪಾಷಾ

ಸ್ವೀಪ್ ಸಮಿತಿ ಚಟುವಟಿಕೆ ಕಾರಣ

ಈ ಬಾರಿ ಕ್ಷೇತ್ರದಲ್ಲಿ ದಾಖಲೆಯ ಮತದಾನ ನಡೆದಿದೆ. ಇದಕ್ಕೆ ಸ್ವೀಪ್ ಸಮಿತಿಯ ಚಟುವಟಿಕೆ ಕಾರಣ. ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅತಿ ಹೆಚ್ಚು ಮತದಾನ ಪ್ರಮಾಣದಲ್ಲಿ ಕೋಲಾರ ಕ್ಷೇತ್ರವು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಷಯ. ಮಂಡ್ಯ ಮೊದಲ ಸ್ಥಾನ ಪಡೆದಿದೆ. ಈ ಬಾರಿ ಆರೋಗ್ಯಕರ ಮತದಾನ ಪಟ್ಟಿ ಸಿದ್ಧಪಡಿಸಿದ್ದೆವು. ಮೃತ ಮತದಾರರನ್ನು ತೆಗೆದಿದ್ದೆವು. 2019ರ ಚುನಾವಣೆಗೆ ಹೋಲಿಸಿದರೆ ಹೊಸದಾಗಿ ಲಕ್ಷ ಮತದಾರರು ಸೇರ್ಪಡೆಯಾಗಿದ್ದರು. ಅದರಲ್ಲಿ 60 ಸಾವಿರ ಹೊಸ ಮಹಿಳಾ ಮತದಾರರೇ ಇದ್ದಾರೆ –ಅಕ್ರಂ ಪಾಷಾ ಜಿಲ್ಲಾಧಿಕಾರಿ

ಮಹಿಳೆಯರ ಮತದಾನ ಇಳಿಕೆ

ಕೋಲಾರ ಮೀಸಲು ಕ್ಷೇತ್ರದ ಒಟ್ಟು ಮತಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಮಹಿಳೆಯರ ಮತದಾನದ ಪ್ರಮಾಣದಲ್ಲಿ ತುಸು ಇಳಿಮುಖವಾಗಿದೆ. ಕ್ಷೇತ್ರದ ಒಟ್ಟು 1726914 ಮತದಾರರ ಪೈಕಿ 1351646 ಮಂದಿ ಮತದಾನ ಮಾಡಿದ್ದಾರೆ.  853829 ಪುರುಷರ ಪೈಕಿ 680900 ಮಂದಿ ಮತದಾನ ಮಾಡಿದ್ದಾರೆ. 872874 ಮಹಿಳೆಯರಲ್ಲಿ 670678 ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT