ಕೋಲಾರ: ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ನಾಲ್ವರು ರೈತರ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ಸುಮಾರು ₹ 1.20 ಲಕ್ಷ ಮೌಲ್ಯದ ಕೇಬಲ್, ಪ್ಯಾನಲ್ ಬೋರ್ಡ್ ಮತ್ತಿತರರ ವಸ್ತುಗಳು ಕಳುವಾಗಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ತೊಟ್ಲಿ ಗ್ರಾಮದ ರೈತರಾದ ಚೌಡರೆಡ್ಡಿ ಎಂಬುವರಿಗೆ ಸೇರಿದ ಪ್ಯಾನಲ್ ಬೋರ್ಡ್ ಮತ್ತು ಕೇಬಲ್, ಚೌಡಪ್ಪ ಅವರ ಪ್ಯಾನಲ್ ಮತ್ತು ಕೇಬಲ್, ಗೋಪಾಲ್ ಎಂಬುವರಿಗೆ ಸೇರಿದ ಸುಮಾರು 20 ಮೀಟರ್‌ಗೂ ಅಧಿಕ ಕೇಬಲ್, ಚೌಡರೆಡ್ಡಿ ಎಂಬುವರಿಗೆ ಸೇರಿದ ಕೇಬಲ್ ಕಳುವಾಗಿದೆ.
ತೊಟ್ಲಿ ಸುತ್ತಮುತ್ತಲ ಗ್ರಾಮಗಳಿಗೆ ಸಂಬಂಧಿಸಿದ ರೈತರು ಹಾಗೂ ಸರ್ಕಾರಿ ಕೊಳವೆಬಾವಿಗಳ ಬಳಿ ಪದೇಪದೇ ಕೇಬಲ್, ಪ್ಯಾನಲ್ ಬೋರ್ಡ್ ಮತ್ತಿತರರ ವಸ್ತುಗಳು ಕಳ್ಳತನವಾಗುತ್ತಲೇ ಇದ್ದು, ದೂರು ನೀಡುತ್ತಲೇ ಇದ್ದರೂ ಈವರೆಗೂ ಕಳ್ಳರ ಪತ್ತೆಯಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ನಡೆದಿರುವ ಕಳುವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ರೈತರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಳ್ಳರನ್ನು ಬಂಧಿಸಿ ಕ್ರಮಕೈಗೊಳ್ಳುವ ಜತೆಗೆ ರಾತ್ರಿ ವೇಳೆ ಗಸ್ತು ನೀಡುವಂತೆಯೂ ಆಗ್ರಹಿಸಿದ್ದಾರೆ.