ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಹುಳು ಸಾಕಾಣಿಕೆಗೂ ತಟ್ಟಿದ ಬಿಸಿಲ ಬೇಗೆ

ಬೆಳೆಗಾರರ ಮಾರ್ಗದರ್ಶನಕ್ಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ
ಮಂಜುನಾಥ ಎಸ್.
Published 6 ಮೇ 2024, 7:07 IST
Last Updated 6 ಮೇ 2024, 7:07 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ರೇಷ್ಮೆ ಬೆಳೆಗಾರರಿಗೆ ಬೆಳೆ ತೆಗೆಯುವುದು ದೊಡ್ಡ ಸವಾಲಾಗಿದೆ. 

ಸಾಮಾನ್ಯವಾಗಿ ರೇಷ್ಮೆ ಬೆಳೆಗೆ 26 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಆದರೆ, 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ರೇಷ್ಮೆ ಹುಳುಗಳನ್ನು ರಕ್ಷಿಸುವುದು ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ.

ತಾಲ್ಲೂಕಿನ ಸುಮಾರು ಮೂರು ಸಾವಿರ ಕುಟುಂಬಗಳು ರೇಷ್ಮೆ ಬೆಳೆಯನ್ನು ಜೀವನಾಧಾರವಾಗಿ ನಂಬಿಕೊಂಡಿವೆ. ಶೀತರಕ್ತ ಕೀಟವಾದ ರೇಷ್ಮೆ ಹುಳುಗಳಿಗೆ ಹೆಚ್ಚಿನ ತಾಪಮಾನ ತಡೆಯುವ ಸಾಮರ್ಥ್ಯ ಕಡಿಮೆ. ಈ ಬಾರಿ ಬಿಸಿಲಿಗೆ ಬೇಗೆ ಹೆಚ್ಚಿದ ಕಾರಣ 9 ದಿನಗಳ ಕಾಲ ಹಿಪ್ಪುನೇರಳೆ ಸೊಪ್ಪು ತಿನ್ನುತ್ತಿದ್ದ ರೇಷ್ಮೆ ಹುಳುಗಳು ಕೇವಲ 5 ರಿಂದ 6 ದಿನಗಳು ಮಾತ್ರ ತಿನ್ನುತ್ತಿವೆ. ಇನ್ನೊಂದೆಡೆ ಬಿಸಿಲ ತಾಪ ಹೆಚ್ಚಾಗಿದ್ದು, ಹಿಪ್ಪು ನೇರಳೆ ಸೊಪ್ಪಿನ ತೇವಾಂಶ ಬೇಗ ಆವಿಯಾಗುತ್ತಿದೆ. ಇದರಿಂದ ಹುಳುಗಳಿಗೆ ಸೊಪ್ಪಿನಿಂದ ಸಿಗುತ್ತಿದ್ದ ನೀರಿನಂಶ ಸಿಗದೆ ಇದರಿಂದ ರೇಷ್ಮೆ ಗೂಡಿನ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ರೇಷ್ಮೆ ಗೂಡುಗಳ ಗುಣಮಟ್ಟ ಮೇಲೂ ಪರಿಣಾಮ ಬೀರುವಂತಾಗಿದೆ. ಹಾಗಾಗಿ, ಈ ಬಾರಿ ಮಾರುಕಟ್ಟೆಗೆ ಈ ಹಿಂದೆಗಿಂತ ಶೇ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ರೇಷ್ಮೆ ಗೂಡುಗಳು ಪೂರೈಕೆಯಾಗುತ್ತಿವೆ. ಬೇಸಿಗೆಯ ಸಮಯದಲ್ಲಿ ರೇಷ್ಮೆ ನಿರ್ವಹಣೆ ಸಲಹೆ ನೀಡಲು ರೇಷ್ಮೆ ಇಲಾಖೆಯಲ್ಲೂ ಸಿಬ್ಬಂದಿಯ ಕೊರತೆ ಎದುರಾಗಿದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ದೊರೆಯದ ಸ್ಥಿತಿ ಎದುರಾಗಿದೆ.

ಬೆಳೆಗಾರರ ಪ್ರಯತ್ನ: ಜಿಲ್ಲೆಯಲ್ಲಿ ಬಿಸಿಲ ತಾಪ ಹೆಚ್ಚಳವಾಗಿರುವುದರಿಂದ ರೇಷ್ಮೆಯ ಬೆಲೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.  ರೇಷ್ಮೆ ಮನೆಗಳಿಗೆ ಸುತ್ತ ಚಪ್ಪರ ಹಾಕುವುದರ ಮೂಲಕ ನೀರಿನ ಪೂರೈಕೆ ಮಾಡುವುದು. ರೇಷ್ಮೆಯ ಮನೆ ಮೇಲೆ ತೆಂಗಿನ ಗರಿಗಳನ್ನು ಹಾಕಿ ಅದರ ಮೇಲೆ ತುಂತುರು ನೀರಾವರಿಯಂತೆ ವ್ಯವಸ್ಥೆ ಮಾಡಿ, ಆಗಾಗ ನೀರನ್ನು ಸಿಂಪಡಿಸುವುದು. ಏರ್‌ ಕೂಲರ್ (ತಂಪು ಪೆಟ್ಟಿಗೆ) ಅಳವಡಿಕೆಯಂಥ ಅನೇಕ ಪ್ರಯತ್ನಗಳನ್ನು ಬೆಳೆಗಾರರು ಮಾಡುತ್ತಿದ್ದಾರೆ.

ಇನ್ನೂ ಕೆಲವು ರೈತರು ರೇಷ್ಮೆ ಸಾಗಾಣಿಕೆಯಿಂದ ಬೆಳೆಗಾರರು ಹಿಂದೆ ಸರಿಯುತ್ತಿದ್ದಾರೆ. ವರ್ಷಕ್ಕೆ 6ರಿಂದ 8 ಬೆಳೆಗಳನ್ನು ಸಾಕಾಣಿಕೆ ಮಾಡುತ್ತಿದ್ದವರು ಸುಡುಬಿಸಿಲಿನ ಹಿನ್ನೆಲೆ ಕೇವಲ 4ರಿಂದ 5 ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಇದರಿಂದ ಹೀಪ್ಪು ನೇರಳೆ ಸೊಪ್ಪನ್ನು ಕೇಳುವರು ಇಲ್ಲದಂತಾಗಿದೆ. ರೇಷ್ಮೆ ಸಾಕಾಣಿಕೆ ವೆಚ್ಚ ಕೂಡ ಬೆಳೆಗಾರರಿಗೆ ದುಬಾರಿಯಾಗಿದೆ. ಇದರಿಂದ ಬೆಳೆಗಾರರು ರೇಷ್ಮೆ ಬೆಳೆಯಬೇಕೆ ಇಲ್ಲವೇ ಎಂಬ ಕುರಿತು ಆತಂಕ ಎದುರಿಸುವಂತಾಗಿದೆ.

ಗಿರಿಯಪ್ಪ
ಗಿರಿಯಪ್ಪ
ರೇಷ್ಮೆ ಮನೆಯ ಮೇಲೆ ತೆಂಗಿನ ಗರಿ ಹಾಕಿ ಅದರ ಮೇಲೆ ನೀರು ಸಿಂಪಡಿಸಿ ಬಿಸಿಲ ತಾಪ ಕಡಿಮೆ ಮಾಡಲು ಯತ್ನಿಸುತ್ತಿರುವ ಬೆಳೆಗಾರ
ರೇಷ್ಮೆ ಮನೆಯ ಮೇಲೆ ತೆಂಗಿನ ಗರಿ ಹಾಕಿ ಅದರ ಮೇಲೆ ನೀರು ಸಿಂಪಡಿಸಿ ಬಿಸಿಲ ತಾಪ ಕಡಿಮೆ ಮಾಡಲು ಯತ್ನಿಸುತ್ತಿರುವ ಬೆಳೆಗಾರ

ಶೀತರಕ್ತ ರೇಷ್ಮೆ ಹುಳುವಿಗೆ ಬಿಸಿಲಿನ ತಾಪ ಹಿಪ್ಪುನೇರಳೆಯಲ್ಲಿ ತೇವಾಂಶ ಕೊರತೆ ರೇಷ್ಮೆ ಗುಣಮಟ್ಟದ ಮೇಲೆ ಪ್ರಭಾವ

ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿದ್ದು ತೇವಾಂಶ ಕಡಿಮೆಯಾಗುವ ಕಾರಣ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಏರುಪೇರಾಗಿ ಹುಳುಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುತ್ತಿವೆ.

-ಗಿರಿಯಪ್ಪ ರೇಷ್ಮೆ ಬೆಳೆಗಾರ

ಬೇಸಿಗೆ ಕಾಲದಲ್ಲಿ ರೇಷ್ಮೆ ಬೆಳೆ ಸಂರಕ್ಷಣೆಗಾಗಿ  ಕೆಲವು ಸಲಹೆಗಳು *ರೇಷ್ಮೆ ಹುಳು ಸಾಕಾಣಿಕೆ ಮನೆಯ ಸುತ್ತಲೂ ಗೋಡೆಗಳ ಮೇಲೆ ಬಿಸಿಲು ಬೀಳದಂತೆ ತೆಂಗಿನ ಗರಿಯಿಂದ ಚಪ್ಪರ ಹಾಕಬೇಕು. ಅದರಲ್ಲೂ ದಕ್ಷಿಣ ಮತ್ತು ಪಶ್ಚಿಮದ ಗೋಡೆಗಳಿಗೆ ಬಿಸಿಲು ಬೀಳದಂತೆ ಎಚ್ಚರ ವಹಿಸಿ ಚಪ್ಪರ ಹಾಕಬೇಕು.ಕಿಟಕಿಗಳಿಗೆ ಗೋಣಿ ತಾಟುಗಳನ್ನು ಹಾಕಿ ಅಗಿಂದಾಗ್ಗೆ ನೀರಿನಿಂದ ನೆನೆಸಬೇಕು * ರೇಷ್ಮೆ ಹುಳು ಸಾಕಾಣಿಕೆ ಮನೆಯ ಮೇಲ್ಚಾವಣಿ ಬಿಸಿಲಿನಿಂದ ಕಾಯದಂತೆ ಶೇಡ್‌ನೆಟ್‌ಗಳನ್ನು ಹೊದಿಸಬೇಕು * ರೇಷ್ಮೆ ಹುಳು ಸಾಕಾಣಿಕೆ ಮನೆಯ ಮೇಲ್ಚಾವಣಿ ಆರ್‌ಸಿಸಿ ಆಗಿದ್ದರೆ ತುಂತುರು ನೀರಾವರಿ ಮೂಲಕ ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ಒಮ್ಮೆ ಮತ್ತು ಸಂಜೆ 4ರಿಂದ 5 ರವರೆಗೆ ನೀರು ಹಾಯಿಸಬೇಕು * ಆರ್‌ಸಿಸಿ ಹುಳು ಸಾಕಾಣಿಕೆ ಮನೆಗಳ ಮೇಲೆ ಕೂಲ್ ಸಮ್ ಬಳಿಯಬೇಕು ಇದರಿಂದ ಮೇಲ್ಚಾವಣಿ ಬಿಸಿಲಿಗೆ ಕಾಯುವುದಿಲ್ಲ. * ಹುಳು ಸಾಕಾಣಿಕೆ ಮನೆಗೆ ಹಿಪ್ಪುನೇರಳೆ ಸೊಪ್ಪನ್ನು ತಂಪು ಹೊತ್ತಿನಲ್ಲಿ ತರಬೇಕು. ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಸೊಪ್ಪನ್ನು ಹುಳುಗಳಿಗೆ ಕೊಡಬೇಕು. ಮಧ್ಯಾಹ್ನದ ಒಂದು ಸೊಪ್ಪಿನ ಪ್ರಮಾಣವನ್ನು ಎರಡು ಭಾಗ ಮಾಡಿ ಬೆಳಿಗ್ಗೆ 11ಕ್ಕೆ ಮತ್ತು ಸಂಜೆ 4ಕ್ಕೆ ಒಮ್ಮೆ ಸೊಪ್ಪನ್ನು ತೆಳುವಾಗಿ ನೀಡಬೇಕು * ಕಟಾವು ಮಾಡಿದ ಸೊಪ್ಪನ್ನು ತೇವಾಂಶ ಆರದಂತೆ ಸೊಪ್ಪನ್ನು ಗೋಣಿತಾಟಿನಿಂದ ಮುಚ್ಚಿ ನೀರನ್ನು ಸಿಂಪರಣೆ ಮಾಡಬೇಕು * ಹುಳು ಸಾಕಾಣಿಕೆ ಮನೆಯ ಹೊರಗಡೆ ಕಿಟಕಿಗಳ ನೇರಕ್ಕೆ ಎತ್ತರದಲ್ಲಿ ಫ್ಯಾನ್ಸ್‌ಗಳನ್ನು ಅಳವಡಿಸಿ ಮನೆಯ ಸುತ್ತಲೂ ತೇವಾಂಶ ಹೆಚ್ಚಿಸಬಹುದು * ಹುಳು ಸಾಕಾಣಿಕೆ ಮನೆಯ ಒಳಗಡೆ ಮಣ್ಣಿನ ಮಡಕೆಯಲ್ಲಿ ನೀರು ತುಂಬಿಸಿ ನೇತುಹಾಕಿ ಇದರಿಂದ ತೇವಾಂಶ ಹೆಚ್ಚುಮಾಡಬಹುದು. * ಹುಳು ಸಾಕಾಣಿಕೆ ಮನೆಯ ಒಳಗಡೆ ಗೋಣಿ ತಾಟುಗಳನ್ನು ನೆಲದ ಮೇಲೆ ಹರಡಿ ನೀರನ್ನು ಚುಮುಕಿಸಬೇಕು. * ಬೇಸಿಗೆಯಲ್ಲಿ ಹುಳು ಸಾಕಾಣಿಕೆ ಮನೆಯ ಉಷ್ಣಾಂಶ 28ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ತೇವಾಂಶ ಶೇ.60ಇರುವಂತೆ ನೋಡಿಕೊಳ್ಳಬೇಕು. * ಹಣ್ಣಾದ ಹುಳುಗಳು ಚಂದ್ರಿಕೆಗಳಿಗೆ ಬಿಟ್ಟನಂತರ ಚಂದ್ರಿಕೆಗಳನ್ನು ನೆರಳಿನಲ್ಲಿ ಇಡತಕ್ಕದ್ದು ಹಾಗೂ ಚಂದ್ರಿಕೆಗಳನ್ನು ಇಟ್ಟ ಜಾಗದಲ್ಲಿ ಉಷ್ಣಾಂಶ 28ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ತೇವಾಂಶ ಶೇ.60ಇರುವಂತೆ ನೋಡಿಕೊಳ್ಳಬೇಕು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT