ಕೋಲಾರ: 15ರ ಹರೆಯದ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಗ್ರಾಮವೊಂದರ ವಿ.ಮನೋಜ್ ಎಂಬ ಯುವಕನಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯ ಬುಧವಾರ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದರ ಸಂಬಂಧ 2023ರ ಸೆಪ್ಟೆಂಬರ್ 19ರಂದು ನೀಡಿದ ದೂರಿನ ಮೇರೆಗೆ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೋಲಾರ ಮಹಿಳಾ ಪೊಲೀಸರು, ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು ಬುಧವಾರ ಅಪರಾಧಿಗೆ ಐಪಿಸಿಯಡಿ 5 ವರ್ಷ, ಪೋಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ (ಒಟ್ಟಾರೆ ಶಿಕ್ಷೆ ಪ್ರಮಾಣ 20 ವರ್ಷ) ಹಾಗೂ ₹ 50 ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ನೊಂದ ಬಾಲಕಿಗೆ ₹ 5 ಲಕ್ಷ ಪರಿಹಾರ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.