ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ವಾಧಿಕಾರದಿಂದ ಭಯೋತ್ಪಾದನೆ ಹೆಚ್ಚಾಗಿದೆ

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆ
Last Updated 17 ಫೆಬ್ರುವರಿ 2019, 9:43 IST
ಅಕ್ಷರ ಗಾತ್ರ

ಕೋಲಾರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರದಿಂದಲೇ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸೂಕ್ತ ಸಂದರ್ಭಗಳಲ್ಲಿ ಸಮರ್ಪಕ ನೀತಿ ಅನುಸರಿಸಿಲ್ಲ. ರಕ್ಷಣಾ ಇಲಾಖೆಗೂ ಅಗತ್ಯ ಸಹಕಾರ ನೀಡಿಲ್ಲ’ ಎಂದು ದೂರಿದರು.

‘ನಾಲ್ಕು ವರ್ಷದಲ್ಲಿ ಜಮ್ಮುಕಾಶ್ಮಿರದಲ್ಲಿ ಭಯೋತ್ಪಾದನೆ ನಿಯಂತ್ರಣ ಮಾಡಲು ಕ್ರಮಕೈಗೊಳ್ಳಬಹುದಿತ್ತು. ಆದರೆ ವಿದೇಶ ಪ್ರವಾಸ ಮಾಡಿಕೊಂಡು ಕಾಲಹರಣ ಮಾಡಿದ್ದಾರೆ ಹೊರತು ದೇಶ ರಕ್ಷಣೆ ಮಾಡುವ ಸೈನಿಕರಿಗೆ ಸರ್ಕಾರದಿಂದ ಯಾವುದೇ ರಕ್ಷಣೆ ನೀಡಿಲ್ಲ’ ಎಂದು ಟೀಕಿಸಿದರು.

‘ಗುರುದಾಸ್‍ಪುರ್, ಪಠಾಣ್‍ಕೋಟ್, ಉರಿ ಈಗ ಪೂಲ್ವಾಮ ಘಟನೆಗಳು ಮರುಕಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದು ಮರುಕಳಿಸದಂತೆ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕರ ವಿರುದ್ದ ಕ್ರಮ ತೆಗೆದುಕೊಂಡರೆ ನಾವು ಬೆಂಬಲ ನೀಡುತ್ತೇವೆ’ ಎಂದರು.

‘ಸಮ್ಮಿಶ್ರ ಸರ್ಕಾರ ಬೀಳಿಸಲು ನಾಲ್ಕು ಬಾರಿ ಬಿಜೆಪಿ ನಡೆಸಿದ ಅಪರೇಷನ್ ಕಮಲ ವಿಫಲವಾಗಿದೆ. ನಮ್ಮ ಪಕ್ಷದ ಅತೃಪ್ತರಿಗೂ ಜ್ಞಾನೋದಯವಾಗಿ ಮರಳಿ ಬಂದಿದ್ದಾರೆ’ ಎಂದು ತಿಳಿಸಿದರು.

‘ಹಣ, ಆಮಿಷವೊಡ್ಡಿ ಸರ್ಕಾರ ಬೀಳಿಸುವ ಬಿಜೆಪಿಯ ಅನೈತಿಕ ಕೆಲಸ ಜಗಜ್ಜಾಹೀರಾಗಿದೆ. ₨ 20ರಿಂದ -₨ 30 ಕೋಟಿ ಹಣ, ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿರುವುದಲ್ಲದೇ, ಸ್ವೀಕರ್, ಕೋರ್ಟ್‍ಅನ್ನು ಅಡ್ಜೆಸ್ಟ್ ಮಾಡಿಕೊಂಡಿದ್ದೇವೆ, ನಮ್ಮದೇ ಕೇಂದ್ರ ಸರ್ಕಾರವಿದೆ ಎಂದೆಲ್ಲಾ ಹೇಳಿ ಮನವೊಲಿಸುವ ಯತ್ನ ಮಾಡಿ, ಈಗ ಅವರೇ ಬಲೆಗೆ ಬಿದಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಇಷ್ಟೆಲ್ಲಾ ಆಮಿಷ ತೋರಿದಾಗ ಸರ್ವೇಸಾಮಾನ್ಯವಾಗಿ ಅತೃಪ್ತಿ ಇರುವವರು ಅತ್ತ ಹೋಗಲು ಯತ್ನ ನಡೆಸುವುದು ಸಹಜ, ಆದರೆ ಇದೀಗ ಅವರ ಆಪರೇಷನ್ ಕಮಲ ವಿಫಲವಾದ ನಂತರ ನಮ್ಮ ಪಕ್ಷದ ದಾರಿ ತಪ್ಪಿದ್ದ ಅತೃಪ್ತರಿಗೂ ಜ್ಞಾನೋದಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಇದೊಂದು ಕೆಟ್ಟ ನಡತೆ ಎಂಬ ಅರಿವಾಗಿದ್ದು, ಮತ್ತೆ ತಪ್ಪು ಮಾಡುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದರು.

18ಕ್ಕೆ ಸಮನ್ವಯ ಸಮಿತಿ ಸಭೆ: ‘ಚರ್ಚೆಯಿಲ್ಲದೇ ಬಜೆಟ್ ಅಂಗೀಕಾರವಾಗಿದೆ. ವಿರೋಧ ಪಕ್ಷದ ಕಳಕಳಿಯೂ ಬಿಜೆಪಿಗೆ ಇಲ್ಲವಾಗಿದೆ. ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವುದೇ ಬಿಜೆಪಿ ಕೆಲಸ. ಲೋಕಸಭಾ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸುತ್ತಿದ್ದು, ಫೆ.18ರಂದು ಕಾಂಗ್ರೆಸ್ ಸಮನ್ವಯಸಮಿತಿ ಸಭೆ ಕರೆಯಲಾಗಿದೆ, ಇದೇ ದಿನ ಸಂಜೆ 6 ಗಂಟೆಗೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯೂ ನಡೆಯಲಿದೆ’ ಎಂದ ವಿವರಿಸಿದರು.

ಜಿಲ್ಲಾಮಟ್ಟದ ಸಮಾವೇಶ: ‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದೆ. ಮಾ.4 ರಂದು ಹಾವೇರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬರಲಿದ್ದಾರೆ, ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. ಈಗಾಗಲೇ ಕಾರ್ಯಕರ್ತರಿಗೆ ಬೂತ್ ಮಟ್ಟದ ತರಬೇತಿ ಕಾರ್ಯಾಗಾರ ನಡೆಯುತ್ತಿದ್ದು, ಫೆ.23 ರಂದು ರಾಯಚೂರು, 26ರಂದು ಮಂಗಳೂರು, 27 ರಂದು ವಿಜಯಪುರದಲ್ಲಿ ಜಿಲ್ಲಾಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT