ಬುಧವಾರ, ಆಗಸ್ಟ್ 4, 2021
27 °C
ಮಾಲೂರು ತಾಲ್ಲೂಕಿನಲ್ಲಿವೆ 329 ಕೆರೆಗಳು; ಕೆರೆ ಮಣ್ಣು ಇಟ್ಟಿಗೆ ತಯಾರಿಕೆಗೆ

ಕೇರಳಕ್ಕೆ ಮಣ್ಣು: ಕೋಲಾರದ ಕೆರೆಗಳೆಲ್ಲ ಕಂದಕ

ವಿ.ರಾಜ್ ಗೋಪಾಲ್ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಕೆರೆಗಳ ನೈಸರ್ಗಿಕ ಸಂಪತ್ತಾದ ಮಣ್ಣನ್ನು ದಂಧೆಕೋರರು ದೋಚುತ್ತಿದ್ದು, ಅಕ್ರಮವಾಗಿ ಇಟ್ಟಿಗೆ ಕಾರ್ಖಾನೆಗಳಿಗೆ, ಕೇರಳಕ್ಕೆ ಸಾಗಿಸುತ್ತಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 329 ಕೆರೆಗಳಿದ್ದು, ಅದರಲ್ಲಿ 25 ದೊಡ್ಡಕೆರೆಗಳಿವೆ. ಅವುಗಳಿಗೆ ಮಳೆ ನೀರು ಹರಿದು ಬರುವ ಮುಖ್ಯ ಕಾಲುವೆಗಳು ಮುಚ್ಚಿಹೋಗಿದ್ದು, ಅದನ್ನು ತೆರವುಗೊಳಿಸುವ ಗೋಜಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿಲ್ಲ.

ತಾಲ್ಲೂಕಿನಲ್ಲಿರುವ ಇಟ್ಟಿಗೆ ಕಾರ್ಖಾನೆಗಳಲ್ಲಿ ಇಟ್ಟಿಗೆ ತಯಾರಿಕೆಗೆ ಅಗತ್ಯವಿರುವ ಮಣ್ಣನ್ನು ಕೆರೆಗಳಿಂದ ತುಂಬಿಸಿ ಸಾಗಿಸಲಾಗುತ್ತಿದ್ದು, ಕೆರೆ ಅಂಗಳಗಳು ಕಂದಕಗಳಾಗಿ ಮಳೆ ನೀರು ಸಂಗ್ರಹಣೆ ಶಕ್ತಿ ಕ್ಷೀಣಿಸಿದೆ.

ತಾಲ್ಲೂಕಿನ ಟೇಕಲ್ ಭಾಗದಲ್ಲಿರುವ ಕೆರೆಗಳು ಸೇರಿದಂತೆ ಪಟ್ಟಣದ ದೊಡ್ಡಕೆರೆ, ಹುಳದೇನಹಳ್ಳಿ ಕೆರೆ, ತಿಮ್ಮನಾಯಕನ ಹಳ್ಳಿ, ಮಾಸ್ತಿ, ಲಕ್ಕೂರು, ಬರಗೂರು ಗ್ರಾಮದ ಕೆರೆ ಸೇರಿ 25 ಕೆರೆಗಳಿವೆ. ಈ ಕೆರೆಗಳಿಂದ ಮಣ್ಣು ಎತ್ತುವ ದುಷ್ಕಾರ್ಯ ಅವಿರತವಾಗಿ ಸಾಗಿದೆ.

ಕೇರಳಕ್ಕೆ ತಾಲ್ಲೂಕಿನ ಕೆರೆಗಳ ಮಣ್ಣು: ಇಟ್ಟಿಗೆ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿದ್ದ ತಾಲ್ಲೂಕಿನ ಕೆರೆಗಳಲ್ಲಿನ ಜೇಡಿಮಣ್ಣಿನ ಮೇಲೆ ನೆರೆಯ ಕೇರಳ ರಾಜ್ಯದವರ ಕಣ್ಣು ಬಿದ್ದಿದೆ.

ಅನೇಕ ಕೆರೆಗಳಲ್ಲಿ ಮಣ್ಣನ್ನು ರಾತ್ರೋರಾತ್ರಿ ನೆರೆಯ ಕೇರಳ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದ್ದು, ಈ ಜೇಡಿಮಣ್ಣಿನಿಂದ
ವಿವಿಧ ಅಲಂಕಾರಿಕ ಕಲಾಕೃತಿಗಳು ಮತ್ತು ಕಲಾತ್ಮಕ ಹೆಂಚು ತಯಾರಿಕೆ ನಡೆಯುತ್ತದೆ.

ತಾಲ್ಲೂಕಿನ ಕೆಲವು ಪ್ರಭಾವಿಗಳು ತಮ್ಮ ಜಮೀನಿನಲ್ಲಿ ಕೆರೆ ಮಣ್ಣನ್ನು ರಾಶಿ ಹಾಕಿಕೊಂಡು ರಾತ್ರೋರಾತ್ರಿ ಹೊರ ರಾಜ್ಯಗಳಿಗೆ ಸಾಗಿಸುವ ಕಳ್ಳದಂಧೆ ನಡೆಸುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕಿನ ಅನೇಕ ಕೆರೆಗಳು ಕಂದಕಗಳಾವೆ.

ಮುಚ್ಚಿವೆ ದೊಡ್ಡಕೆರೆ ಕಾಲುವೆ: ಪಟ್ಟಣದಲ್ಲಿನ 132 ಎಕರೆ ವಿಸ್ತೀರ್ಣದ ದೊಡ್ಡಕೆರೆಗೆ ನೀರುಣಿಸುವ ಕಾಲುವೆಗಳು ಮುಚ್ಚಿ ಹೋಗಿವೆ. ಈ ಕೆರೆಯಲ್ಲೀಗ ಕೊಳಚೆ ನೀರು ಸಂಗ್ರಹವಾಗಿದೆ. ಪುರಸಭೆಯಿಂದ ಕೆರೆ ಅಂಗಳದಲ್ಲಿ ಸುಮಾರು 60ರಿಂದ 75 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಪೈಪ್‌ಲೈನ್ ಅಳವಡಿಸಿ ಪಟ್ಟಣದ ಬಹುತೇಕ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಕೆರೆ ಒಂದು ಬಾರಿ ತುಂಬಿದರೆ 2 ವರ್ಷ ನೀರಿನ ಬವಣೆ ತಪ್ಪುತ್ತದೆ ಎಂಬುದು ಇಲ್ಲಿನ ಹಿರಿಯರ ಮಾತು. ಆದರೆ, ಕೆರೆಯಲ್ಲಿ ನೀರು ಶೇಖರಣೆ ಆಗದೆ ಅಂತರ್ಜಲ ಕುಸಿಯುತ್ತಿರುವುದರಿಂದ ಪಟ್ಟಣದ ಜನತೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಇಲ್ಲಿನ ದೊಡ್ಡಕೆರೆಗೆ ನಾಲ್ಕು ದಿಕ್ಕುಗಳಿಂದ ನೀರು ಹರಿಯುವ ವ್ಯವಸ್ಥೆ ಇದೆ. ಆದರೆ, ಮುಖ್ಯ ಕಾಲುವೆಗಳನ್ನು ಅತಿಕ್ರಮ ಮಾಡಿಕೊಂಡಿರುವುದರಿಂದ ಹಾಗೂ ಕೆಲವು ಭಾಗಗಳಲ್ಲಿ ಕಾಲುವೆ ದುರಸ್ತಿ ಮಾಡದೆ ಇರುವುದರಿಂದ ಕೆರೆಗೆ ನೀರು ಹರಿಯುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು