ಗುರುವಾರ , ನವೆಂಬರ್ 21, 2019
23 °C

ಜಾಲಪ್ಪರ ಶಿಕ್ಷಣ ಸಂಸ್ಥೆಗೆ ಜಮೀನು: ಧರಣಿ

Published:
Updated:
Prajavani

ಕೋಲಾರ: ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಸೇರಿದ ಸರ್ಕಾರಿ ಜಮೀನನ್ನು ನಿಯಮಬಾಹಿರವಾಗಿ ಜಾಲಪ್ಪ ಆಸ್ಪತ್ರೆಗೆ ನೀಡಲಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಮಹಾವಿದ್ಯಾಲಯದ ಎದುರು ಧರಣಿ ನಡೆಸಿದರು.

‘ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಪಳ್ಳಿ ಗ್ರಾಮದ ಸರ್ವೆ ನಂಬರ್‌ 15ರಲ್ಲಿರುವ 10 ಎಕರೆ ಜಮೀನನ್ನು ಈ ಹಿಂದೆ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ ಆ ಜಮೀನನ್ನು 99 ವರ್ಷದ ಅವಧಿಗೆ ಜಾಲಪ್ಪ ಆಸ್ಪತ್ರೆಗೆ ಗುತ್ತಿಗೆ ನೀಡಲಾಗಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ಕೃಷಿ ನಂಬಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ರೈತರು ಸರ್ಕಾರಗಳ ಅವೈಜ್ಞಾನಿಕ ನೀತಿ ಹಾಗೂ ಕಾರ್ಪೊರೇಟ್‌ ಕಂಪನಿಗಳ ರೈತ ವಿರೋಧಿ ಧೋರಣೆಯಿಂದ ಬೀದಿಗೆ ಬಿದ್ದಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಗಳು ಅಭಿವೃದ್ಧಿಯ ಸೋಗಿನಲ್ಲಿ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡುತ್ತಿವೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ತೋಟಗಾರಿಕಾ ಮಹಾವಿದ್ಯಾಲಯದ ಜಮೀನನ್ನು ಅಕ್ರಮವಾಗಿ ಜಾಲಪ್ಪರ ಶಿಕ್ಷಣ ಸಂಸ್ಥೆಗೆ ಕೊಟ್ಟಿದ್ದಾರೆ. ರೈತರ ತರಬೇತಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಮೀಸಲಾದ ಮಹಾವಿದ್ಯಾಲಯದ ಜಮೀನು ಖಾಸಗಿಯವರ ಪಾಲಾಗಿದೆ. ಜಾಲಪ್ಪರ ಶಿಕ್ಷಣ ಸಂಸ್ಥೆಯು ವಂತಿಗೆ ರೂಪದಲ್ಲಿ ಬಡ ವಿದ್ಯಾರ್ಥಿಗಳ ಹಾಗೂ ಪೋಷಕರ ರಕ್ತ ಹೀರುತ್ತಿದೆ’ ಎಂದು ಕಿಡಿಕಾರಿದರು.

ಕರಾರು ರದ್ದುಪಡಿಸಿ: ‘ಗುತ್ತಿಗೆ ಕರಾರು ರದ್ದುಪಡಿಸಿ ಜಮೀನು ಹಿಂಪಡೆಯಬೇಕು. ಆ ಜಮೀನನ್ನು ರೈತರಿಗೆ ಅನುಕೂಲವಾಗುವ ತರಬೇತಿಗೆ, ಪ್ರಾಯೋಗಿಕ ಬೆಳೆಗಳಿಗೆ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬಳಕೆ ಮಾಡಬೇಕು. ಜಾಲಪ್ಪ ಸಂಸ್ಥೆಗೆ ಜಮೀನು ನೀಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ನಾಗರಾಜಗೌಡ, ಪ್ರತಾಪ್, ಮಂಜುನಾಥ್, ಆಂಜಿನಪ್ಪ, ಹರೀಶ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)