ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪುಗಾರಿಕೆ ಬಿಟ್ಟು ಕೆಲಸ ಮಾಡಿ

ಕಾರ್ಯಕರ್ತರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ಕಿವಿಮಾತು
Last Updated 28 ಮೇ 2020, 13:09 IST
ಅಕ್ಷರ ಗಾತ್ರ

ಕೋಲಾರ: ‘ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಿಸಾನ್ ಖೇತ್ ಕಾರ್ಯಕರ್ತರು ಹೋರಾಟ ನಡೆಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಿಸಾನ್‌ ಖೇತ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಶ್ರೀನಿವಾಸ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಕಾಂಗ್ರೆಸ್‌ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಪಕ್ಷವಾಗಿದೆ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ನೀಡಿರುವ ಜವಾಬ್ದಾರಿ ನಿರ್ವಹಿಸಬೇಕು’ ಎಂದರು.

‘ಕಾರ್ಯಕರ್ತರು ಗುಂಪುಗಾರಿಕೆ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಇತರೆ ಪಕ್ಷಗಳಿಗೆ ಸರಿಸಮಾನಾಗಿ ನಿಲ್ಲುತ್ತದೆ. ಪಕ್ಷದ ಎಲ್ಲಾ ಘಟಕಗಳಿಗೆ ಯುವಕರನ್ನು ಸೇರ್ಪಡೆ ಮಾಡಿದರೆ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಪ್ರತಿ ಬೂತ್‌ಗೆ 5 ಯುವಕರನ್ನು ನೇಮಿಸಿ ತರಬೇತಿ ನೀಡಬೇಕು. ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ’ ಎಂದು ಹೇಳಿದರು.

ಹೋರಾಟಕ್ಕೆ ಸಹಕರಿಸಿ: ‘ಪ್ರಚಾರಕ್ಕಾಗಿ ಹೋರಾಟ ಮಾಡುವುದು ಬೇಡ. ಜನರ ನೈಜ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಬೇಕು. ರೈತರು ತಮ್ಮ ಸಮಸ್ಯೆಗಳನ್ನು ಪಕ್ಷದ ಗಮನಕ್ಕೆ ತಂದು ಹೋರಾಟಕ್ಕೆ ಸಹಕಾರ ನೀಡಬೇಕು’ ಎಂದು ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಶ್ರೀನಿವಾಸ್ ಮನವಿ ಮಾಡಿದರು.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸುಳ್ಳು ಪ್ಯಾಕೇಜ್ ಘೋಷಿಸಿ ಜನರ ದಿಕ್ಕು ತಪ್ಪಿಸುತ್ತಿದೆ. ರೈತರು ಹಾಗೂ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಪಾತಳಕ್ಕೆ ಕುಸಿದಿದೆ. ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸದೆ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ’ ಎಂದು ಆರೋಪಿಸಿದರು.

ಖಜಾನೆ ಖಾಲಿ: ‘ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಆದರೆ, ಮೋದಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರವು ಘೋಷಿಸಿರುವ ಯಾವುದೇ ಯೋಜನೆ ಜನರನ್ನು ತಲುಪಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಬಡವರು, ರೈತರು ಹಾಗೂ ಕಾರ್ಮಿಕರಿಗೆ ಕೇಂದ್ರದ ಪ್ಯಾಕೇಜ್‌ನಿಂದ ಯಾವುದೇ ಅನುಕೂಲವಿಲ್ಲ. ಕೇಂದ್ರವು ರೈತರ ಸಾಲ, ಬಡ್ಡಿ ಮನ್ನಾ ಮಾಡಿಲ್ಲ. ಬದಲಿಗೆ ಬಂಡವಾಳಶಾಹಿಗಳು ಮತ್ತು ಉದ್ಯಮಿಗಳ ಸಾಲ ಮನ್ನಾ ಮಾಡಿದೆ’ ಎಂದು ಟೀಕಿಸಿದರು.

‘ಕೇಂದ್ರವು ಜನರಿಗೆ ಸಮಯಾವಕಾಶ ನೀಡದೆ ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದು ಅವೈಜ್ಞಾನಿಕ. ವಲಸೆ ಕಾರ್ಮಿಕರಿಗೆ ಕನಿಷ್ಠ ಸಾರಿಗೆ ಹಾಗೂ ಆಹಾರದ ವ್ಯವಸ್ಥೆ ಮಾಡಲು ಕೇಂದ್ರಕ್ಕೆ ಸಾಧ್ಯವಾಗಿಲ್ಲ. ವಲಸೆ ಕಾರ್ಮಿಕರು ಸಾವಿರಾರು ಕಿಲೋ ಮೀಟರ್ ನಡೆದು ಅಶಕ್ತರಾಗಿ ಮೃತಪಟ್ಟಿದ್ದಾರೆ’ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಉದಯ್‌ಶಂಕರ್, ನಗರಸಭೆ ಸದಸ್ಯ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಕ್ಬಾಲ್ ಅಹಮ್ಮದ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT