ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ನೀರು ಹರಿಸಲು 5 ದಿನದ ಗಡುವು ನೀಡಿದ ಶಾಸಕ ಕೆ.ವೈ.ನಂಜೇಗೌಡ

ಮಾಲೂರು ತಾಲ್ಲೂಕಿಗೆ ಹರಿಯದ ನೀರು: ಶಾಸಕ ನಂಜೇಗೌಡ ಅಸಮಾಧಾನ
Last Updated 25 ಫೆಬ್ರುವರಿ 2020, 14:25 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ನಿರೀಕ್ಷಿತ ಮಟ್ಟದಲ್ಲಿ ಹರಿಯದ ಹಿನ್ನೆಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರು ತಾಲ್ಲೂಕಿನ ನರಸಾಪುರದ ಬಳಿಯ ಪಂಪ್‌ಹೌಸ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ಪಂಪ್‌ ಮಾಡಲಾಗುತ್ತಿದೆ? ಯಾವ ಕೆರೆಗಳಿಗೆ ನೀರು ಹರಿದಿದೆ ಎಂಬ ಮಾಹಿತಿ ಕೊಡಿ’ ಎಂದು ನಂಜೇಗೌಡ ಅಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ ಎಂಜಿನಿಯರ್‌ಗಳ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಶಾಸಕರು ಸ್ಥಳದಿಂದಲೇ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ‘ಮಾಲೂರು ತಾಲ್ಲೂಕಿಗೆ ಏಕೆ ಕೆ.ಸಿ ವ್ಯಾಲಿ ನೀರು ಹರಿಸುತ್ತಿಲ್ಲ. ತಮ್ಮ ತಾಲ್ಲೂಕಿನ ಪಾಲಿನ ನೀರನ್ನು ಕೂಡಲೇ ಹರಿಸಬೇಕು. ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಪರಿಸ್ಥಿತಿಯ ಗಂಭೀರತೆ ಅರಿತು ನೀರು ಹರಿಸಿ’ ಎಂದು ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ‘ಕೆ.ಸಿ ವ್ಯಾಲಿ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಪರಿಶೀಲನೆ ಮಾಡಲು ಖುದ್ದು ಪಂಪ್‌ಹೌಸ್‌ಗೆ ಭೇಟಿ ಕೊಟ್ಟಿದ್ದೇನೆ’ ಎಂದು ತಿಳಿಸಿದರು.

ಪ್ರತಿಭಟನೆ ಎಚ್ಚರಿಕೆ: ‘ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ಎಂಜಿನಿಯರ್‌ಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾಲೂರು ತಾಲ್ಲೂಕಿಗೆ ಹರಿಸಬೇಕಾದ ನೀರನ್ನು 5 ದಿನದೊಳಗೆ ಹರಿಸಲು ಜಿಲ್ಲಾಡಳಿತ ವಿಫಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ೧೦ ಸಾವಿರ ರೈತರೊಂದಿಗೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ಈ ಹಿಂದೆ ಮಾಲೂರು ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ನೀಡಿದ್ದ ₹ ೧೮ ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಚರ್ಚಿಸಿದ ನಂತರ ಇದೀಗ ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ವಿವರಿಸಿದರು.

‘ಸಂಸದ ಮುನಿಸ್ವಾಮಿ ಅವರು ವಿನಾಕಾರಣ ನನ್ನ ವಿರುದ್ಧ ಮಾಡುವ ಆರೋಪ ಹಾಗೂ ಟೀಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಜನರು ಕೊಟ್ಟಿರುವ ಅವಕಾಶವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನಾನು ಸಂಸದರಿಂದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT