ಮುಳಬಾಗಿಲು: ಆಂಧ್ರಪ್ರದೇಶದ ತಿರುಪತಿ ಹಾಗೂ ಚಿತ್ತೂರು ಕಡೆಗಳಿಂದ ಬೆಂಗಳೂರಿನ ಕಡೆಗೆ ತೆರಳುವ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು ನಗರದ ಒಳಗೆ ಬರದೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಹೋಗುತ್ತಿವೆ. ಇದರಿಂದ ನಗರದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನಗರದ ಜನರಿಗೆ ಅನುಕೂಲವಾಗುವಂತೆ ತಿರುಪತಿ ಮತ್ತು ಚಿತ್ತೂರು ಕಡೆಯಿಂದ ಬೆಂಗಳೂರಿನ ಕಡೆಗೆ ತೆರಳುವ ಸರ್ಕಾರಿ ಬಸ್‌ಗಳು ನಗರದ ಒಳಗಿನಿಂದಲೇ ಸಂಚರಿಸಬೇಕು ಎಂದು ಸೂಚಿಸಬೇಕು ಎಂದು ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ನಂಗಲಿ, ಎನ್. ವಡ್ಡಹಳ್ಳಿ ಮತ್ತಿತ್ತರ ಕಡೆಗಳಿಂದ ಪ್ರತಿನಿತ್ಯ ಮುಳಬಾಗಿಲು ನಗರಕ್ಕೆ ಬಂದು ಹೋಗುವ ನೂರಾರು ವಿದ್ಯಾರ್ಥಿಗಳು ಮತ್ತು ನೌಕರರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ನಗರ ಪ್ರವೇಶಿಸದೆ ಬೈಪಾಸ್ ಮೂಲಕ ಹೋಗುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹೆದ್ದಾರಿಯಲ್ಲಿ ಹೋಗುವ ಎಲ್ಲ ಬಸ್‌ಗಳು ನಗರದ ಒಳಗಿನಿಂದಲೇ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಅನ್ಸರ್ ಪಾಷ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಜಂಟಿ ಯುವ ಕಾರ್ಯದರ್ಶಿ ಎಂ.ಎಸ್.ಮಂಜುನಾಥ್, ಸಂಗಸಂದ್ರ ಶ್ರೀಧರ್, ಶ್ರೀನಿವಾಸ್, ಅಂಬರೀಶ್, ಚಂದನ್ ಇದ್ದರು