ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಸಮಾಜ ಸಂಘಟಿತವಾಗಲಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಕಿವಿಮಾತು
Last Updated 4 ಫೆಬ್ರುವರಿ 2020, 13:51 IST
ಅಕ್ಷರ ಗಾತ್ರ

ಕೋಲಾರ: ‘ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾದರೆ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳಿಗೆ ಎಲ್ಲರ ನೆನಪು ಬರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲಾ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಸವಿತಾ ಸಮಾಜ ಶುಭ ಕಾರ್ಯಗಳಿಗೆ ಮುಂದಿರುತ್ತದೆ. ಆದರೆ, ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಸಮುದಾಯ ಸಂಘಟಿತವಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು. ಸರ್ಕಾರದ ಸವಲತ್ತುಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಕನ್ನಡ ಭಾಷೆ ವಿಚಾರದಲ್ಲಿ ಪ್ರತಿಯೊಬ್ಬರು ಜಾತಿ, ಧರ್ಮ ಬಿಟ್ಟು ಕೆಲಸ ಮಾಡಬೇಕು. ನಾನು ಜಿ.ಪಂ ಸದಸ್ಯನಾಗಿ ಆಯ್ಕೆಯಾಗುವಲ್ಲಿ ಸವಿತಾ ಸಮುದಾಯದವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ ಅಧ್ಯಕ್ಷನಾಗಲು ಸಮುದಾಯದ ಸಹಕಾರ ಸಿಕ್ಕಿದೆ’ ಎಂದರು.

ಬದುಕಿಗೆ ದಾರಿ ದೀಪ

‘ಯಾವುದೇ ಸಮುದಾಯಕ್ಕೆ ಗುರು ಮುಖ್ಯ ಪಾತ್ರ ವಹಿಸುತ್ತಾನೆ. ಅಂತಹ ಗುರುಗಳ ಆಚಾರ ವಿಚಾರ ಬದುಕಿಗೆ ದಾರಿ ದೀಪವಾಗಿದೆ’ ಎಂದು ತಹಶೀಲ್ದಾರ್ ಶೋಭಿತಾ ಹೇಳಿದರು.

‘ಗುರುಗಳ ಹಾದಿಯಲ್ಲಿ ಸಾಗಿ ಆಚಾರ ವಿಚಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಬಹುದು. ಮುಂದಿನ ಪೀಳಿಗೆಗೆ ಗುರುಗಳ ಮಾರ್ಗದರ್ಶನ ಪರಿಚಯಿಸಬೇಕು. ಸಮಾಜದಲ್ಲಿ ಹಿಂದುಳಿದಿರುವ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ಭಾಗದಲ್ಲಿ ಈಗಾಗಲೇ ಭೂಮಿ ಮತ್ತು ವಸತಿರಹಿತರನ್ನು ಗುರುತಿಸಲಾಗಿದೆ. ಅವರಿಗೆ ಭೂಮಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹಿಂದುಳಿದ ಸಮುದಾಯಗಳ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಅಭಿವೃದ್ಧಿಗೆ ಒತ್ತು

‘ತಳ ಸಮುದಾಯಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಈ ಬಗ್ಗೆ ಸರ್ಕಾರಗಳು ಎಚ್ಚೆತ್ತು ತಳ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಸವಿತಾ ಸಮಾಜದ ರಾಜ್ಯ ಘಟಕದ ನಿರ್ದೇಶಕ ಬಿ.ಟಿ.ಆನಂದ್‌ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಸವಿತಾ ಮಹರ್ಷಿ ಭಾವಚಿತ್ರಗಳ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸವಿತಾ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಗಣೇಶ್, ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಬಂಗಾರಪೇಟೆ ಎಪಿಎಂಸಿ ನಿರ್ದೇಶಕ ಎಂ.ನಾರಾಯಣಸ್ವಾಮಿ, ವೈದ್ಯ ಡಾ.ಡಿ.ಕೆ.ರಮೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT