ಗುರುವಾರ , ಜುಲೈ 29, 2021
23 °C

ಪುಸ್ತಕ ಓದುವ ಹವ್ಯಾಸ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಾಹಿತ್ಯ ನಿಂತ ನೀರಾಗಬಾರದು. ಬದಲಿಗೆ ಅದು ಜನಸಾಮಾನ್ಯರನ್ನು ಮುಟ್ಟಬೇಕು. ಹೊಸ ಜ್ಞಾನ ಪಡೆಯಲು ಪ್ರತಿಯೊಬ್ಬರೂ ಸಾಹಿತ್ಯದ ಅಭಿಮಾನಿಗಳಾಗಬೇಕು. ಆಗ ಮಾತ್ರ ಸಾಹಿತ್ಯದ ಬೇರು ಗಟ್ಟಿಯಾಗುತ್ತದೆ ಮತ್ತು ಸಾಹಿತ್ಯ ಬೆಳೆಯುತ್ತದೆ’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸಾಹಿತ್ಯ ಮಿತ್ರರ ಬಳಗವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಾ ಕಂಡ ಕವಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯದ ಪ್ರತಿ ಪ್ರಕಾರದಲ್ಲೂ ನಮ್ಮ ಸಂಸ್ಕೃತಿ ಅಡಗಿದೆ. ಸಾಹಿತ್ಯ ರಚನೆ ಸಂದರ್ಭದಲ್ಲಿ ಜನಮಾನಸದಲ್ಲಿ ಉಳಿಯುವ ಕೃತಿಗಳು ಹೊರಬರಬೇಕ. ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಎಲ್ಲರಲ್ಲೂ ಬೆಳೆಯಬೇಕು’ ಎಂದು ಆಶಿಸಿದರು.

‘ಯುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡಿಗರು ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳಬೇಕು. ಶಾಂತಿ, ಸಹನೆ, ತಾಳ್ಮೆ, ಸಹೋದರತೆಯ ಜತೆಗೆ ಬದುಕಬೇಕು’ ಎಂದು ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್ ಎಂದು ಸಲಹೆ ನೀಡಿದರು.

‘ಕನ್ನಡ ಭಾಷೆಯು ಭವ್ಯ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಹೊಂದಿದೆ. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ. ಬಾಲ್ಯಾವಸ್ಥೆಯಿಂದ ವೃದ್ಧಾಪ್ಯದವರೆಗೆ ಎಲ್ಲಾ ಸ್ತರಗಳಲ್ಲೂ ರಚಿಸುವ ಸಾಹಿತ್ಯವನ್ನು ಜನರು ಗುರುತಿಸುವಂತಾಗಬೇಕು. ಸಾಹಿತ್ಯದ ಗಂಧ ಪರಿಮಳ ಮನೆ ಮನೆಗೂ ಮುಟ್ಟಬೇಕು’ ಎಂದು ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಟಿ.ಸುಬ್ಬರಾಮಯ್ಯ ಹೇಳಿದರು.

ಕವಿ ಶರಣಪ್ಪ ಗಬ್ಬೂರು, ಕನ್ನಡಪರ ಹೋರಾಟಗಾರ ಪಿ.ನಾರಾಯಣಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.