ಮಂಗಳವಾರ, ಸೆಪ್ಟೆಂಬರ್ 28, 2021
21 °C
ಪಾಳೇಗಾರಿಕೆ ಸಂಸ್ಕೃತಿ ನಾಶವಾಗಲಿ: ಶಾಸಕ ರಮೇಶ್‌ಕುಮಾರ್‌ ಗುಡುಗು

ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಣಹದ್ದಿನಂತಹವರು ರಾಜಕೀಯದಲ್ಲಿ ಇದ್ದಾರೆ. ಇವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುತ್ತಾರೆ. ಇಂತಹ ರಣಹದ್ದುಗಳ ರೆಕ್ಕೆ ಕತ್ತರಿಸಿದರೆ ಮಾತ್ರ ಕಾಂಗ್ರೆಸ್‌ಗೆ ಉಳಿಗಾಲ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಗುಡುಗಿದರು.

ರಾಜೀವ್‌ಗಾಂಧಿ ಪಂಜಾಯತ್‌ರಾಜ್ ಸಂಘಟನೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ‘ಪಕ್ಷದಲ್ಲಿ ಹಣವಂತರಿಗೆ ಮಣೆ ಹಾಕುವುದನ್ನು ಮೊದಲು ಬಿಡಬೇಕು. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಆಗ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಿಗೆ ವಿಶ್ವಾಸ ಮೂಡುತ್ತದೆ’ ಎಂದರು.

‘ಸಮಾಜದ ಕಟ್ಟಕಡೆಯ ಪ್ರಜೆಗೂ ಅಧಿಕಾರ ಸಿಗಬೇಕು ಎಂಬುದು ಪಂಚಾಯತ್‌ರಾಜ್ ವ್ಯವಸ್ಥೆಯ ಉದ್ದೇಶ. ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ಕೆಲ ಪಕ್ಷಗಳ ಸಹಮತ ಇರಲಿಲ್ಲ. ಆದರೆ, ನಜೀರ್‌ಸಾಬ್‌ ಹಟಕ್ಕೆ ಬಿದ್ದು ಈ ವ್ಯವಸ್ಥೆ ಜಾರಿಗೊಳಿಸಿದರು. ಚುನಾವಣಾ ರಾಜಕೀಯಕ್ಕಾಗಿ ಮೀಸಲಾತಿ ಜಾರಿ ತಪ್ಪು. ಅಧಿಕಾರ ಹಂಚಿಕೆ ಮೊಟಕುಗೊಳಿಸುವುದನ್ನು ವಿರೋಧಿಸುತ್ತೇನೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿನ ಪಾಳೇಗಾರಿಕೆ ಸಂಸ್ಕೃತಿ ನಾಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕು. ಕೇವಲ ಚುನಾವಣೆ ದೃಷ್ಟಿಯಿಂದ ಸಂಘಟನೆ ಮಾಡದೆ ಪಕ್ಷದ ಸಿದ್ಧಾಂತಗಳ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸಬೇಕು. ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಮೊದಲು ನಮ್ಮಲ್ಲಿ ಪ್ರಾಮಾಣಿಕತೆ ಬರಬೇಕು. ನಂತರ ಪಕ್ಷ ಸಂಘಟನೆ ಆಗಬೇಕು’ ಎಂದು ಕಿವಿಮಾತು ಹೇಳಿದರು.

‘ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದಕ್ಕಿಂತ ಕೆಟ್ಟ ಪರಿಸ್ಥಿತಿ ಈಗಿನ ಬಿಜೆಪಿ ಸರ್ಕಾರದಲ್ಲಿದೆ. ರಾಮಮಂದಿರ ನಿರ್ಮಾಣವು ಬಿಜೆಪಿಯವರ ಅಜೆಂಡಾ. ಗರೀಬಿ ಹಠಾವೋ ಕಾಂಗ್ರೆಸ್‌ನ ಸಿದ್ಧಾಂತ. ಕಾಂಗ್ರೆಸ್ ಸಿದ್ಧಾಂತಗಳನ್ನು ಮೊದಲು ಸ್ವಪಕ್ಷಿಯರು ಅರಿಯಬೇಕು’ ಎಂದು ಸಲಹೆ ನೀಡಿದರು.

‘ಹುಟ್ಟು ಹಬ್ಬ ಆಚರಣೆ, ಫ್ಲೆಕ್ಸ್‌ ಹಾಕಿಸಿ ಜೈಕಾರ ಹಾಕಿಸಿಕೊಳ್ಳುವುದನ್ನು ಮೊದಲು ಬಿಡಿ. ನೇರವಾಗಿ ಮಾತನಾಡುವುದನ್ನು ಕಲಿಯಿರಿ. ಪಕ್ಷದಲ್ಲಿ ವಿಕೇಂದ್ರೀಕರಣ ಸಿದ್ಧಾಂತ ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ’ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಪ್ರವಾಸ: ‘ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ತಳ ಮಟ್ಟದಿಂದ ಪಕ್ಷ ಸಂಘಟಿಸಲಾಗುತ್ತಿದೆ. ಕಾಂಗ್ರೆಸ್‌ ಸಾಧನೆಗಳನ್ನು ಜನರಿಗೆ ತಿಳಿಸಲಾಗುತ್ತದೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ’ ಎಂದು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ವಿವರಿಸಿದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಸಂಘಟನೆಯ ರಾಜ್ಯ ಘಟಕದ ಸಂಚಾಲಕ ವಿಜಯ್‌ಸಿಂಗ್, ರಾಷ್ಟ್ರೀಯ ಸಲಹೆಗಾರ ಡಿ.ಆರ್.ಪಾಟೀಲ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.