ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗೆ ಜನಸೇವೆ ದಾಹವಿರಲಿ

ಪಕ್ಷದ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಿವಿಮಾತು
Last Updated 25 ಸೆಪ್ಟೆಂಬರ್ 2021, 13:21 IST
ಅಕ್ಷರ ಗಾತ್ರ

ಕೋಲಾರ: ‘ರಾಜಕಾರಣಿಗಳಿಗೆ ಅಧಿಕಾರ ದಾಹದ ಬದಲು ಜನಸೇವೆಯ ದಾಹ ಇರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಇಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ನಡೆದ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಮುಂದಿನ 15 ತಿಂಗಳಲ್ಲಿ ಚುನಾವಣೆ ಬರಲಿದ್ದು, ಎಲ್ಲಾ ಕ್ಷೇತ್ರದಲ್ಲೂ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರಬೇಕು. ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಶಪಥ ಮಾಡಬೇಕು’ ಎಂದರು.

‘ಸಭೆ ಸಮಾರಂಭಗಳಲ್ಲಿ ಪಕ್ಷದ ಚಿಹ್ನೆ ಪ್ರದರ್ಶಿಸುವ ಮೂಲಕ ಜನರಲ್ಲಿ ಸರ್ಕಾರದ ಸಾಧನೆ ಬಿಂಬಿಸಬೇಕು. ಪ್ರತಿ ಬೂತ್‌ನಲ್ಲಿ 10 ಮಂದಿಯನ್ನು ಸಂಪಾದಿಸಿ ಪಕ್ಷ ಸಂಘಟಿಸುವ ಮೂಲಕ ಮುಖಂಡರು ಎನಿಸಿಕೊಳ್ಳಬೇಕೇ ಹೊರತು ಒಂಟಿಯಾಗಿ ಬರುವವರು ಎಂದು ಮುಖಂಡರು ಎನಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಪಕ್ಷದ ಶಾಸಕರಿದ್ದರೆ ಮಾತ್ರ ನಮ್ಮ ಕೆಲಸ ಆಗಲು ಸಾಧ್ಯ. ಇಲ್ಲವಾದರೆ ಪಕ್ಷ ಹಾಗೂ ನಾವು ಮೂಲೆಗುಂಪಾಗುತ್ತೇವೆ. ಪಕ್ಷದಲ್ಲಿ ಸಕ್ರಿಯವಾಗಿರುವವರನ್ನು ಮಾತ್ರ ಮುಖಂಡರಾಗಿ ಗುರುತಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ 15 ದಿನದ ಲೀಡರ್‌ಗಳು ನಮಗೆ ಬೇಕಿಲ್ಲ. ಪಕ್ಷ ಸಂಘಟಿಸದೆ ಪಟ್ಟಿ ಕೊಡುವ ಮೂಲಕ ಎಲ್ಲವೂ ನನ್ನದೆ ಎಂದು ಬಿಂಬಿಸಿಕೊಳ್ಳುವವರ ಅಗತ್ಯವಿಲ್ಲ. ನಿಜವಾಗಿ ಪಕ್ಷ ಸಂಘಟಿಸುವವರಿಗೆ ಮಾತ್ರ ಮನ್ನಣೆ ಕೊಡುತ್ತೇವೆ’ ಎಂದು ತಿಳಿಸಿದರು.

‘ದೇಶದಲ್ಲಿ ಬಿಜೆಪಿಯು 3 ಸಂಸದ ಸ್ಥಾನಗಳಿಂದ 303 ಸ್ಥಾನಕ್ಕೆ ಏರಿಕೆ ಆಗಿರುವುದರ ಹಿಂದೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಅವರಂತಹ ಮಹನೀಯರ ತ್ಯಾಗ, ಶ್ರಮವಿದೆ. ಬಿಜೆಪಿಸಂಸ್ಥಾಪಕರಲ್ಲಿ ಉಪಾಧ್ಯಯರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

‘ದೇಶದ ಮುಕುಟವಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೋರಾಟದಲ್ಲಿ ಉಪಾಧ್ಯಾಯರು ಮುಂಚೂಣಿಯಲ್ಲಿ ನಿಂತು, ಬಿಜೆಪಿಗೆ ಭದ್ರ ಬುನಾದಿ ಹಾಕಿದರು. ಪಕ್ಷದ ದೇಶಪ್ರೇಮ ಪ್ರದರ್ಶಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ಕನಸು ನನಸಾಗಬೇಕು’ ಎಂದು ಆಶಿಸಿದರು.

ಸಮಿತಿ ರಚಿಸಿ: ‘ಪ್ರತಿ ಬೂತ್‌ಗೆ ಸಮಿತಿ ರಚಿಸಿಕೊಳ್ಳಬೇಕು. ಹಿಂದಿನ ಚುನಾವಣೆಯಲ್ಲಿ 800 ಬೂತ್‌ಗಳಲ್ಲಿ ಬಿಜೆಪಿಯ ಏಜೆಂಟರೇ ಇರಲಿಲ್ಲ. ಇದು ಪುನಾರಾವರ್ತನೆ ಆಗದಂತೆ ಪ್ರತಿ ಬೂತ್‌ನಲ್ಲಿ ಕನಿಷ್ಠ 25 ಮಂದಿಯ ಸಮಿತಿ ರಚಿಸಬೇಕು. ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಎಲ್ಲೆಡೆ ಪಕ್ಷ ಅಧಿಕಾರ ಹಿಡಿಯಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಗೆ ಒಳ್ಳೆಯ ಸಚಿವರು ಸಿಕ್ಕಿದ್ದು, ಈ ಅವಕಾಶ ಸದ್ಬಳಕೆಯಾಗಬೇಕು. ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆ ಪಡೆಯಬೇಕು. ಮುಂದೆ ಜಿಲ್ಲೆಯಲ್ಲಿ ಪಕ್ಷದ ಮೂರ್ನಾಲ್ಕು ಮಂದಿ ಶಾಸಕರಾಗಿ ಆಯ್ಕೆಯಾಗಬೇಕು. ಕೆ.ಸಿ ವ್ಯಾಲಿ ನೀರಿನ ಜತೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಕೃಷಿ ಸಮೃದ್ಧವಾಗಿದೆ. ಕೆರೆಗಳನ್ನು ಸ್ವಚ್ಛಗೊಳಿಸಿದ ಪರಿಣಾಮ ತುಂಬಿ ಕೋಡಿ ಹರಿಯುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT