ಶುಕ್ರವಾರ, ಜೂನ್ 18, 2021
22 °C
ಕಾರ್ಯಪಡೆ ಸಮಿತಿ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶ್ವೇತಾ ಹೇಳಿಕೆ

ಸೋಂಕು ಮುಕ್ತ ನಗರಕ್ಕೆ ಶ್ರಮಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಗರವನ್ನು ಸೋಂಕು ಮುಕ್ತವಾಗಿಸಲು ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡೋಣ’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಹೇಳಿದರು.

ಇಲ್ಲಿ ಮಂಗಳವಾರ ನಡೆದ ವಾರ್ಡ್‌ವಾರು ಕಾರ್ಯಪಡೆ ಸಮಿತಿಯ ಅಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕಾರ್ಯಪಡೆ ಸಮಿತಿಯು ವಾರ್ಡ್‌ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ತಡೆಗೆ ನಿರಂತರ ಕೆಲಸ ಮಾಡಬೇಕು’ ಎಂದರು.

‘ಕೋವಿಡ್ ಹೆಮ್ಮಾರಿಯಾಗಿ ಬೆಳೆಯುತ್ತಿದೆ. ಸೋಂಕಿತರು ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯಕೀಯ ಆಮ್ಲಜನಕಕ್ಕೆ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೋವಿಡ್‌ ಬಗ್ಗೆ ಜನರನ್ನು ಜಾಗೃತಗೊಳಿಸಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದರೆ ಎಲ್ಲಾ ಸಮಸ್ಯೆ ಪರಿಹಾರವಾಗುತ್ತವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಜನರನ್ನು ಎಚ್ಚರಿಸೋಣ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲಾಧಿಕಾರಿಯು ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರತಿ ವಾರ್ಡ್‌ಗೆ ಒಬ್ಬರು ಜಿಲ್ಲಾ ಮಟ್ಟ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ. ನಗರದ 35 ವಾರ್ಡ್‌ಗಳಿಗೆ ಒಟ್ಟಾರೆ 35 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಾರ್ಯಪಡೆ ಸಮಿತಿಗೆ ಆಯಾ ವಾರ್ಡ್‌ನ ನಗರಸಭಾ ಸದಸ್ಯರು ಅಧ್ಯಕ್ಷರಾಗಿರುತ್ತಾರೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ವಿವರಿಸಿದರು.

‘ಕಾರ್ಯಪಡೆ ಸಮಿತಿಯು ವಾರ್ಡ್‌ಗಳ ವ್ಯಾಪ್ತಿಯ ಜನರಲ್ಲಿ ಅಂತರ ಪಾಲನೆ, ಮಾಸ್ಕ್‌ ಧರಿಸುವುದು, ಸ್ವಚ್ಛತೆ ಕಾಪಾಡುವುದು, ಕೋವಿಡ್ ಮಾರ್ಗಸೂಚಿ ಅನುಸರಿಸುವ ಬಗ್ಗೆ ಅರಿವು ಮೂಡಿಸಬೇಕು. ಅಗ್ನಿಶಾಮಕ ದಳವುಇಡೀ ನಗರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಿದೆ. ಕೋವಿಡ್ ಮುಕ್ತ ಕೋಲಾರಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಸಂಪರ್ಕದಲ್ಲಿರಿ: ‘ವಾರ್ಡ್‌ಗಳ ವ್ಯಾಪ್ತಿಯ ಅಂಗಡಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಆಗುತ್ತಿದೆಯೇ ಎಂಬ ಬಗ್ಗೆ ನೋಡಲ್‌ ಅಧಿಕಾರಿಗಳು ಗಮನ ಹರಿಸುತ್ತಾರೆ. ಈ ಅಧಿಕಾರಿಗಳೊಂದಿಗೆ ಆಯಾ ವಾರ್ಡ್‌ ಸದಸ್ಯರು ನಿರಂತರ ಸಂಪರ್ಕದಲ್ಲಿ ಇರಬೇಕು’ ಎಂದು ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ ಸೂಚಿಸಿದರು.

‘ನಗರದ ಜನವಸತಿ ಪ್ರದೇಶಗಳು, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು, ಸರ್ಕಾರಿ ಕಚೇರಿಗಳ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತೇವೆ. ಈಗಾಗಲೇ ಈ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ನಗರಸಭಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.