ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ರಂಗದಲ್ಲಿ ರಾಜಕೀಯ ಚುನಾವಣೆಗೆ ಸೀಮಿತ

Last Updated 29 ನವೆಂಬರ್ 2021, 13:38 IST
ಅಕ್ಷರ ಗಾತ್ರ

ಕೋಲಾರ: ‘ಪಿಕಾರ್ಡ್ ಬ್ಯಾಂಕನ್ನು ಡಿಸಿಸಿ ಬ್ಯಾಂಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇವೆ’ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷ ವಿ.ಎಂ.ವೆಂಕಟೇಶ್‌ ಹೇಳಿದರು.

ಇಲ್ಲಿ ಸೋಮವಾರ ನಡೆದ ಬ್ಯಾಂಕ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿ ಮಾತನಾಡಿ, ‘ಚುನಾವಣೆಯಲ್ಲಿ ಯಾವುದೇ ರಾಜಕೀಯ ಬೇಧ ಭಾವವಿಲ್ಲದೆ ನನ್ನನ್ನು ಆಯ್ಕೆ ಮಾಡಲಾಗಿದೆ. ಬ್ಯಾಂಕ್‌ನ ಅಭಿವೃದ್ದಿಯೊಂದೇ ನಮ್ಮ ಮೂಲಮಂತ್ರ. ಸಹಕಾರಿ ತತ್ವಗಳಲ್ಲಿ ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಬೇಕು. ಉಳಿದಂತೆ ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿರುವುದಕ್ಕೆ ಅವಿರೋಧ ಆಯ್ಕೆ ನಿದರ್ಶನ’ ಎಂದರು.

‘ಮಹಿಳೆಯರಿಗೂ ಸಮಾನ ಹಕ್ಕು ಎಂಬಂತೆ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಬೆಂಬಲಿತ ನಿರ್ದೇಶಕರು ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಮೊದಲೇ ನಿರ್ಧರಿಸಿದಂತೆ ಅವಿರೋಧವಾಗಿ ನಮ್ಮನ್ನು ಆಯ್ಕೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.

‘ಬ್ಯಾಂಕ್‌ನಲ್ಲಿ ಪ್ರಥಮ ಹಂತವಾಗಿ ₹ 1 ಕೋಟಿಯನ್ನು ಆರ್ಹರಿಗೆ ಸಾಲ ವಿತರಿಸಲಾಗುವುದು. ನಂತರ 2ನೇ ಹಂತದಲ್ಲಿ ₹ 2 ಕೋಟಿ ಸಾಲ ವಿತರಿಸಲಾಗುವುದು. ಡಿಸೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಸಾಮಾನ್ಯ ಸಭೆ ಕರೆಯಲು ನಿರ್ಧರಿಸಿದ್ದು, ಎಲ್ಲಾ ನಿರ್ದೇಶಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ’ ಎಂದು ವಿವರಿಸಿದರು.

‘ಅಧ್ಯಕ್ಷ ಸ್ಥಾನದ ಅವಧಿ 38 ತಿಂಗಳಿದೆ. ಅಧಿಕಾರದ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸರ್ಕಾರದ ಎಲ್ಲಾ ಸೌಲಭ್ಯಗಳೊಂದಿಗೆ ಸಮಾಜದ ಕಟ್ಟಕಡೆಯ ರೈತರನ್ನು ಮುಖ್ಯವಾಹಿನಿಗೆ ತರುವುದು ಆಡಳಿತ ಮಂಡಳಿ ಗುರಿ’ ಎಂದು ಹೇಳಿದರು.

ಉಪಾಧ್ಯಕ್ಷರಾಗಿ ಬಿ.ಎನ್.ಶೋಭಾ ಅವಿರೋಧ ಆಯ್ಕೆಯಾದರು. ಪಿಕಾರ್ಡ್ ಬ್ಯಾಂಕ್‌ ನಿರ್ದೇಶಕರಾದ ವಿ.ಎ.ಶಶಿಧರ್, ಎಚ್.ಕೃಷ್ಣೇಗೌಡ, ಕೆ.ಸಿ.ಮಂಜುನಾಥ್, ಟಿ.ಕೆ.ಬೈರೇಗೌಡ, ಸೊಣ್ಣೇಗೌಡ, ಜಿ.ಎಂ.ರಾಧಾಕೃಷ್ಣ, ಎ.ಶಿವಕುಮಾರ್, ಸುನಂದಮ್ಮ, ಎಂ.ಮಂಜುನಾಥ್, ಕೆ.ಎಂ.ಗೋವಿಂದಪ್ಪ, ಜಿ.ಅಮರೇಶ್, ಬಿ.ಎನ್.ಶಿವಕುಮಾರ್,ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT