ಮಂಗಳವಾರ, ಜನವರಿ 28, 2020
18 °C

ಸಾಹಿತ್ಯ ಸಮ್ಮೇಳನ: ಗೋವಿಂದರೆಡ್ಡಿ ಅಧ್ಯಕ್ಷರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪರಿಷತ್ತಿನ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ 2020ರ ಜ.17 ಮತ್ತು 18ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತಿ ಸಿ.ಎಂ.ಗೋವಿಂದರೆಡ್ಡಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ನಿವೃತ್ತ ಸಹಾಯಕ ಪ್ರಾಧ್ಯಾಪಕರಾದ ಗೋವಿಂದರೆಡ್ಡಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲೆಯ ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದಲ್ಲಿ 1958ರಲ್ಲಿ ಜನಿಸಿದ ಗೋವಿಂದರೆಡ್ಡಿ ಅವರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಎ ಪದವೀಧರರಾದ ಇವರು ‘ಕೋಲಾರ ಜಿಲ್ಲೆಯ ಜಾತ್ರೆಗಳು’ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು 2006ರಲ್ಲಿ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಗೋವಿಂದರೆಡ್ಡಿ ಅವರು ಬಣ್ಣದ ಚಿಟ್ಟೆ, ಮಕ್ಕಳ ಮಂದಾರ, ಜಂಗಮ ಜೋಗಿ, ಕಂದನ ಕವಿತೆ, ಬಕಾಸುರನ ಹೊಟ್ಟೆ, ಕತ್ತಲೊಡಲ ಬೆಳಕು, ಜಡಿ ಮಳೆ, ಉರಿವ ಏಕಾಂತ ದೀಪ, ಪದ್ಯ ಹೇಳುವ ಮರ, ಒಂದು ತೇವದ ಗೀತೆ, ಚಿಣ್ಣರ ಲೋಕದ ಬಣ್ಣದ ಹಾಡು, ಚಿಣ್ಣರ ಪಯಣ, ಬಾರಲೇ ಹಕ್ಕಿ ಬಣ್ಣದ ಹಕ್ಕಿ, ಊರು ತೇರು, ಬಣ್ಣದ ತಗಡಿನ ತುತ್ತೂರಿ, ಮತ್ತೊಂದು ಮಹಾಭಾರತ, ಗೀಜಗನ ಗೂಡು, ಭೀಮನ ಬದುವೆ, ಚಿಣ್ಣರ ಚಿಲಿಪಿಲಿ, ಬಲಿ, ಸಿರಿಧಾನ್ಯ, ಆನಂದ, ಶೂದ್ರ ದೀವಿಗೆ, ಜನಪರ ಕವಿ ಯೋಗಿ ವೇಮನ, ಹಸ್ತಿನಾವತಿ, ಪರ್ವತಾರಣ್ಯ, ಕುರುಕ್ಷೇತ್ರ, ಮಹಾಪ್ರಸ್ಥಾನ, ಹುತ್ತಯ್ಯ ಹೀಗೆ ಹಲವು ಹನಿಗವನ, ಕವನ ಸಂಕಲನ, ಮಕ್ಕಳ ನಾಟಕ, ಮಹಾಕಾವ್ಯ ಹಾಗೂ ನೀಳ್ಗವಿತೆ ಬರೆದಿದ್ದಾರೆ.

ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪುಸ್ತಕ ಬಹುಮಾನ, ‘ಪ್ರಜಾವಾಣಿ’ಯ ದೀಪಾವಳಿ ಶಿಶು ಕಾವ್ಯ ಸ್ಪರ್ಧೆಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಸು ಸಂಗಮೇಶ ಪುರಸ್ಕಾರ ಮತ್ತು ವಸುದೇವ ಭೂಪಾಲಂ ದತ್ತಿ ಪುರಸ್ಕಾರ, ಪೆರ್ಲ ಕೃಷ್ಣ ಭಟ್ಟ ಸಾಂಸ್ಕೃತಿಕ ಪ್ರತಿಷ್ಠಾನದ ಪೆರ್ಲ ಕಾವ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ನಾ.ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ, ತುಮಕೂರು ಅನನ್ಯ ಪ್ರಕಾಶನದ ಕೆ.ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ಕಾವ್ಯಾನಂದ ಪುರಸ್ಕಾರ, ನಾಗನೂರು ರುದ್ರಾಕ್ಷಿ ಮಠದ ಹರ್ಡೀಕರ್‌ ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಸೊಗಸು ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಮ್ಮೇಳನದ ಯಶಸ್ಸಿಗೆ ಎಲ್ಲಾ ಸಾಹಿತ್ಯಾಸಕ್ತರು, ಪರಿಷತ್ತಿನ ಆಜೀವ ಸದಸ್ಯರು ಸಹಕರಿಸಬೇಕು ಎಂದು ನಾಗಾನಂದ ಕೆಂಪರಾಜ್‌ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು