ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಮಾರ್ಗದಿಂದ ಬದುಕು ಸುಂದರ: ವಿಜಯ್‌ಕುಮಾರ್

ಬುದ್ಧ ಪೂರ್ಣಿಮೆ
Last Updated 18 ಮೇ 2019, 13:02 IST
ಅಕ್ಷರ ಗಾತ್ರ

ಕೋಲಾರ: ‘ಬುದ್ಧ ಮಾರ್ಗದಲ್ಲಿ ಜೀವನ ಸಾಗಿಸಿದರೆ ಬದುಕು ಸುಂದರವಾಗುತ್ತದೆ. ಬುದ್ಧನ ತತ್ವಾದರ್ಶ ಸಾಕಾರಗೊಳಿಸಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು’ ಎಂದು ಬೌದ್ಧ ಧರ್ಮ ಪ್ರಚಾರಕ ವಿಜಯ್‌ಕುಮಾರ್ ಸಲಹೆ ನೀಡಿದರು.

ತಾಲ್ಲೂಕಿನ ಅಮ್ಮೇರಹಳ್ಳಿಯಲ್ಲಿ ಶನಿವಾರ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಸುಮಾರು 40 ಭಾಷಣ ನೀಡಿದ್ದಾರೆ. ಅವರು ತಮ್ಮ ಭಾಷಣದಲ್ಲಿ ಬೌದ್ಧ ಧರ್ಮದ ಪ್ರಾಮುಖ್ಯತೆ ತಿಳಿಸಿದ್ದಾರೆ’ ಎಂದು ಹೇಳಿದರು.

‘ಗೌತಮ ಬುದ್ಧ ಜನಸಾಮಾನ್ಯರಲ್ಲಿ ಹೊಸ ದೃಷ್ಟಿಕೋನ ಬಿತ್ತಿದ ಮೊದಲ ಪುರುಷ. ಉತ್ತಮ ಸಮಾಜಜ ನಿರ್ಮಾಣದ ಕನಸು ಕಂಡಿದ್ದ ಆತ ವ್ಯವಸ್ಥೆಯ ಓರೆಕೋರೆ ಸರಿಪಡಿಸುವ ಮಾರ್ಗ ತೋರಿದ. ಜಗತ್ತು ಗುಣಿತದ ವೇಗದಲ್ಲಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ನೆಮ್ಮದಿಯ ಬದುಕಿಗೆ ಬುದ್ಧ ಮಾರ್ಗ ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

‘ಅತ್ಯುನ್ನತ ಮಟ್ಟ ತಲುಪಿದ ಬುದ್ಧನಂತಹ ಮಹನೀಯರ ಜೀವನ ಸಾಧನೆ ಅಧ್ಯಯನ ಮಾಡಿದರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಮೂಢನಂಬಿಕೆ ವಿರುದ್ಧ ಸಮರ, ಶೋಷಿತರಿಗೆ ಕರುಣೆ ತೋರಲು ಮತ್ತು ಅಸಮಾನತೆ ತೊಡೆದು ಹಾಕಲು ಬುದ್ಧ ಜೀವನವನ್ನೇ ಮುಡಿಪಾಗಿಟ್ಟರು. ಬಲಹೀನರಿಗೆ ಶಕ್ತಿ ತುಂಬುವ ಮೂಲಕ ದೇಶದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು’ ಎಂದು ಸ್ಮರಿಸಿದರು.

ಶಾಂತಿ ನೆಲೆಸುತ್ತದೆ: ‘ಗೌತಮ ಬುದ್ಧ ಜೀವನದ ರೀತಿ ಹೇಳಿಕೊಟ್ಟಿದ್ದಾರೆ. ಮನುಕುಲ ಬುದ್ಧನ ಅಹಿಂಸಾ ಮಾರ್ಗದಲ್ಲಿ ಸಾಗಿದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಪ್ರಾಣಿ ಹತ್ಯೆ, ಕಳ್ಳತನ, ವೇಶ್ಯಾವಾಟಿಕೆ ಮತ್ತು ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಬೇಕು. ಸಮಾಜದಲ್ಲಿ ಸಮಾನತೆ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಸದುದ್ದೇಶಕ್ಕೆ ಶ್ರಮಿಸಬೇಕು. ವೈರಿಗಳನ್ನೂ ಪ್ರೀತಿಸುವುದನ್ನು ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.

‘ವೈಶಾಖ ಬುದ್ಧ ಪೂರ್ಣಿಮೆಯನ್ನು ಶ್ರೀಲಂಕಾದಲ್ಲಿ ಮೊದಲ ಬಾರಿಗೆ 1950ರಲ್ಲಿ ಆಚರಿಸಲಾಯಿತು. ಅಂದಿನಿಂದ ಜಗತ್ತಿನೆಲ್ಲೆಡೆ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ. 1999ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೂ ಆಚರಣೆ ಮಾಡಲಾಗಿದೆ. ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ಒಂದೇ ದಿನ ಆಗಿರುವುದು ವಿಶೇಷ’ ಎಂದು ವಿವರಿಸಿದರು.

‘ಸಿದ್ಧಾರ್ಥನಾಗಿದ್ದ ವ್ಯಕ್ತಿ ಬುದ್ಧನಾಗಿ ಮಾರ್ಪಾಡು ಹೊಂದಿದ ದಿನವೇ ಬುದ್ಧ ಪೂರ್ಣಿಮೆ. ಬುದ್ಧನಿಗೆ ಬದಲಾವಣೆಯ ಅನಿವಾರ್ಯತೆ ಇರಲಿಲ್ಲವಾದರೂ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿ ಸಮಸ್ಯೆಗೆ ಪರಿಹಾರ ಸಿಗಬೇಕೆಂಬ ಉದ್ದೇಶದಿಂದ ಬದಲಾವಣೆ ಆದ’ ಎಂದು ಮಾಹಿತಿ ನೀಡಿದರು.

ಗ್ರಾಮಸ್ಥರಾದ ಸಿ.ಎಂ.ಅಶೋಕ, ಆಂಜಿನಪ್ಪ, ದಿನೇಶ್, ಜಿ.ಎಂ.ರವಿ, ಚಂದು, ಕೆ.ಮಂಜುನಾಥ್, ಶಿವರಾಜ್, ಎ.ಮಂಜು, ಸುದರ್ಶನ್, ಗಜೇಂದ್ರ, ಸತೀಶ್, ವೆಂಕಟರತ್ನಮ್ಮ, ಭಾಗ್ಯಮ್ಮ, ಗೌರಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT