ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಕೆ.ಎಚ್‌. ಮುನಿಯಪ್ಪ

Published 8 ಮಾರ್ಚ್ 2024, 15:12 IST
Last Updated 8 ಮಾರ್ಚ್ 2024, 15:12 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಟಿಕೆಟ್ ಕೇಳಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಶಾಸಕರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡುತ್ತೇವೆ. ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಆಗಲಿ ಮತ್ತೆ ಕಾಂಗ್ರೆಸ್‍ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಕೆಲಸ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಟುಂಬಸ್ಥರಿಗೆ ಟಿಕೆಟ್ ಕೇಳಲಾಗಿದೆ ಎಂದು ಮಾಧ್ಯಮದವರು ತಮ್ಮ ಅಭಿಪ್ರಾಯಗಳನ್ನು, ಜನರ ಅಭಿಪ್ರಾಯಗಳನ್ನು ಬಿಂಬಿಸುತ್ತಿದ್ದೀರಿ. ನಾನೂ ಹೈಕಮಾಂಡ್‍ ಮಟ್ಟದಲ್ಲಿ ಕೆಲಸ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ದೇವರು ಆಶೀರ್ವದಿಸಿದರೆ ಕೋಲಾರದಲ್ಲಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ನಾನೂ ಸೇರಿದಂತೆ ಎಲ್ಲ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಮುಂದಾಗುತ್ತೇವೆ’ ಎಂದರು.

ದಲಿತ ಮುಖ್ಯಮಂತ್ರಿ ಸಂಬಂಧ ಮತ್ತೆ ಎದ್ದಿರುವ ಕೂಗಿಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಪಕ್ಷಕ್ಕೆ ಈ ಸಮುದಾಯಗಳಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ. ಹಾಗೆಯೇ, ಪಕ್ಷವೂ ಈ ಸಮುದಾಯಕ್ಕೆ ಆದ್ಯತೆ ನೀಡಿದೆ. ಈಗಲೂ 9 ಮಂದಿ ದಲಿತರನ್ನು ಸಚಿವರನ್ನಾಗಿಸಿದೆ. ರಾಜ್ಯದಲ್ಲಿ ಗ್ಯಾರಂಟಿಗಳು ಯಶಸ್ವಿಯಾಗಿ ₹ 4.5 ಕೋಟಿ ಜನರಿಗೆ ತಲುಪಿದ್ದು, ಈ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಆಶಾಭಾವನೆ ಹೊಂದಿದ್ದೇವೆ’ ಎಂದು ಹೇಳಿದರು.

‘ದೇಶದಲ್ಲಿ ಶಾಂತಿ ಇಲ್ಲದಾಗಿದ್ದು, ಗಲಭೆಗಳಾಗಿವೆ. ಜನರಲ್ಲಿ ನೆಮ್ಮದಿ ಇಲ್ಲ. ಅದನ್ನು ತರುವ ಸಲುವಾಗಿ ಕಾಂಗ್ರೆಸ್ ಅನಿವಾರ್ಯವಾಗಿ ಅಧಿಕಾರ ಹಿಡಿಯಬೇಕಿದ್ದು. ಆ ಸಮಯ ಈಗ ಬಂದಿದೆ. ಮೂರನೇ ಬಾರಿ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದನ್ನು ಮಾಧ್ಯಮದವರು ಹೇಳುತ್ತಿದ್ದೀರಿ. ರಾಷ್ಟ್ರದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕಾ‌ರ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರ ವಹಿಸಲಿದೆ’ ಎಂದರು.

‘ಜಾತ್ಯತೀತ ತತ್ವ ಉಳಿಸಿ, ಗಾಂಧೀಜಿಯ ಕನಸು ನನಸು ಮಾಡಬೇಕಿರುವ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಗಳನ್ನೂ, ಸಂವಿಧಾನವನ್ನೂ ರಕ್ಷಣೆ ಮಾಡಬೇಕಾಗುತ್ತದೆ. ಅನೇಕ ಮಹನೀಯರು, ಜೈಲುವಾಸ, ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಮುಖಂಡರ ಬೇಡಿಕೆಯಂತೆ ದೇವನಹಳ್ಳಿ ಚುನಾವಣೆ ಬಳಿಕ ಕೋಲಾರದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಚರ್ಚ್, ದರ್ಗಾಗೆ ಭೇಟಿ ನೀಡಿ ಹರಕೆ ತೀರಿಸಿ, ಪ್ರಾರ್ಥಿಸಿಕೊಂಡಿದ್ದೇನೆ. ಜಿಲ್ಲೆಗೆ ಒಳಿತನ್ನು ಮಾಡಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದು, ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲರೂ ಒಗ್ಗೂಡಿ ಬಾಳಿ ಬದುಕಬೇಕಾಗಿದೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ‘ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ ಸತತ 7 ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಸುಮಾರು 30 ವರ್ಷ ಸಂಸದರಾಗಿ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಅನೇಕ ಬೆಂಬಲಿಗರನ್ನು ಬೆಳೆಸಿದ್ದಾರೆ. ಆಹಾರ ಸಚಿವರಾಗಿ ರಾಜ್ಯದ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ’ ಎಂದರು.

ತಮ್ಮ 76ನೇ ವರ್ಷದ ಜನ್ಮದಿನದ ಪ್ರಯುಕ್ತ ಸಮಾರಂಭದಲ್ಲಿ ಸಾಯಿಬಾಬಾ ಮಂದಿರದಲ್ಲಿ ಮುಖಂಡರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುನಿಯಪ್ಪ ಅವರು ಕೇಕ್‌ ಕತ್ತರಿಸಿ ಬೆಂಬಲಿಗರಿಗೆ ತಿನ್ನಿಸಿದರು.

ಇದಕ್ಕೂ ಮುನ್ನ ಸಚಿವ ಕೆ.ಎಚ್.ಮುನಿಯಪ್ಪ ದೇವಾಲಯಗಳು, ಚರ್ಚ್ ಹಾಗೂ ದರ್ಗಾಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು.

ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಗರದ ಕ್ಲಾಕ್ ಟವರ್ ಬಳಿಯ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಚರ್ಚ್‍ಗೆ ಭೇಟಿ ನೀಡಿ ಕೇಕ್ ಕತ್ತರಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೋಲಾರಮ್ಮ, ಸೋಮೇಶ್ವರಸ್ವಾಮಿ, ಸಾಯಿಬಾಬಾ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಬಳಿಕ ಕೋಟಿ ಲಿಂಗಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಜಿಲ್ಲಾ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‍ಬಾಬು, ಉದಯ್‍ಶಂಕರ್, ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಮುಖಂಡರಾದ ಎಲ್.ಎ.ಮಂಜುನಾಥ್, ಓಬಿಸಿ ಮಂಜುನಾಥ್‌, ನಾಗರಾಜ್, ತ್ಯಾಗರಾಜ್‌, ಅತಾವುಲ್ಲಾ, ಶ್ರೀಕೃಷ್ಣ, ರಾಮಯ್ಯ ಇದ್ದರು.

ರಾಜ್ಯದಲ್ಲಿ 28 ಕ್ಷೇತ್ರವನ್ನೂ ಗೆಲ್ಲಲಿದ್ದೇವೆ: ಸಚಿವ ಕಾಂಗ್ರೆಸ್‌ಗೆ ದಲಿತ ಸಮುದಾಯದಿಂದ ಹೆಚ್ಚಿನ ಬೆಂಬಲ–ಮುನಿಯ‌ಪ್ಪ ದೇಗುಲ, ದರ್ಗಾ, ಚರ್ಚ್‌ಗೆ ಭೇಟಿ
ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಯಾವುದೇ ಸಮುದಾಯದ (ಪರಿಶಿಷ್ಟ ಜಾತಿಯ ಎಡಗೈ ಅಥವಾ ಬಲಗೈ) ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಕಾಂಗ್ರೆಸ್‌ ಗೆಲ್ಲಿಸಲು ಪ್ರಯತ್ನಿಸುತ್ತೇವೆ
ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ
‘ನಾನು ಆ ಮಟಕ್ಕಿಳಿದು ಮಾತನಾಡಲಾರೆ’
‘ನಾನು ಯಾರನ್ನೂ ಟೀಕಿಸುವುದಿಲ್ಲ. ಆ ಮಟ್ಟಕ್ಕಿಳಿದು ಮಾತನಾಡಲಾರೆ. ನೀವು ಬೇಕಾದರೆ ಅವರನ್ನೇ ಕೇಳಿ. ಅವರವರ ಅಭಿಪ್ರಾಯ ತಿಳಿಸುವ ಅಧಿಕಾರ ಅವರಿಗಿದೆ. ಇಂಥ ಸಣ್ಣ ವಿಚಾರಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರೋ ಮಾತನಾಡಿದ್ದಕ್ಕೆ ಉತ್ತರ ಕೊಡಲು ನಾನು ಬಯಸುವುದಿಲ್ಲ’ ಎಂದು ಕೆ.ಎಚ್‌.ಮುನಿಯಪ್ಪ ಜಾರಿಕೊಂಡರು. ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ಕ್ಷೇತ್ರದಲ್ಲಿ ಬಲಗೈ ಸಮುದಾಯದ ಹಾಗೂ ಸ್ಥಳೀಯರು ಈ ಬಾರಿ ಅಭ್ಯರ್ಥಿ ಆಗಲಿದ್ದಾರೆಂದು ಎಂದಿರುವುದಕ್ಕೆ ಹಾಗೂ ಈಚೆಗೆ ಕಾಂಗ್ರೆಸ್‌ ಸಭೆಯಲ್ಲಿ ನಡೆದ ಬಣಗಳ ನಡುವಿನ ಮಾರಾಮಾರಿ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT