ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಮ್ಮನ ಕೈ ಹಿಡಿದ ಮೇಕೆ ಸಾಕಾಣಿಕೆ

ಕೃಷಿಯಲ್ಲಿ ನಷ್ಟ, ಪಶುಸಂಗೋಪನೆಯಲ್ಲಿ ಲಾಭ
Last Updated 9 ಮಾರ್ಚ್ 2022, 7:04 IST
ಅಕ್ಷರ ಗಾತ್ರ

ಮಾಲೂರು: ನರೇಗಾ ಯೋಜನೆಯಡಿ ಮೇಕೆ ಸಾಕಾಣಿಕೆಗೆ ಅಗತ್ಯವಿರುವ ಶೆಡ್ ನಿರ್ಮಾಣ ಮಾಡಿಕೊಂಡು ಚಿರತೆ ಮತ್ತು ಕಳ್ಳರ ಆತಂಕದಿಂದ ದೂರವಾಗಿದ್ದಾರೆ ಬನಹಳ್ಳಿ ರೈತ ಮಹಿಳೆ ಮಂಜಮ್ಮ, ಆರ್ಥಿಕವಾಗಿ ಸದೃಢರಾಗಿದ್ದಾರೆ.

ತಾಲ್ಲೂಕಿನ ಟೇಕಲ್ ಹೋಬಳಿಯ ಬನಹಳ್ಳಿ ಗ್ರಾಮದ ರೈತ ಮಹಿಳೆ ಮಂಜಮ್ಮ ಮೇಕೆಗಳ ಸಾಕಾಣಿಕೆ ಮಾಡುತ್ತಿದ್ದು, ಗುಡ್ಡಗಾಡು ಪ್ರದೇಶವಾಗಿರುವುದರಿಂದ ಚಿರತೆಗಳ ಕಾಟದಿಂದ ತತ್ತರಿಸಿದ್ದರು. ಇದಕ್ಕೆ ಬೆನ್ನಲುಬಾಗಿ ನಿಂತಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

ಕೃಷಿ ಜೊತೆ ಹೈನುಗಾರಿಕೆ, ಕೋಳಿ, ಕುರಿ ಮೇಕೆ, ಹಂದಿ ಸಾಕಾಣಿಕೆಯಂತಹ ಉಪಕಸುಬುಗಳಿಗೆ ರೈತರು ಅವಲಂಬಿತರಾಗಿತ್ತಾರೆ. ಅಲ್ಲದೆ ಕೃಷಿಗೆ ಪೂರಕವಾಗಿರುವ ಈ ಉಪ ಕಸುಬುಗಳು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪಶುಸಂಗೋಪನೆಯಿಂದ ರೈತರಿಗೆ ಬೇಸಾಯಕ್ಕೆ ಬೇಕಾದ ಕೊಟ್ಟಿಗೆ ಗೊಬ್ಬರ ಸಹ ದೊರೆಯುತ್ತಿದೆ. ಈ ರೀತಿಯ ಸಮಗ್ರ ಕೃಷಿ ಪದ್ಧತಿಗಳು ರೈತರ ಕೃಷಿ ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡಿ, ಅವರನ್ನ ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ, ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿಸಲು ಯೋಜನೆ ಸಹಾಯಕವಾಗಿವೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ ಪಡೆದುಕೊಂಡು 100 ದಿನಗಳ ಕಾಲ ಕೂಲಿ ಮಾಡಿ, ದಿನಕ್ಕೆ ₹289 ಕೂಲಿ ಮೊತ್ತವನ್ನು ಪಡೆಯುತ್ತಾರೆ. ಅಲ್ಲದೆ ವೈಯಕ್ತಿಕ ಕಾಮಗಾರಿಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ಬೇಡಿಕೆ ಇಟ್ಟರೆ, ಆ ವರ್ಷದ ಕ್ರಿಯಾ ಯೋಜನೆಯಲ್ಲಿ ರೈತರ ಬೇಡಿಕೆ ಮೇರೆಗೆ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಒದಗಿಸಿಕೊಡುತ್ತದೆ.

ಬನಹಳ್ಳಿ ಗ್ರಾಮದ ಮಂಜಮ್ಮ ಮೇಕೆಗಳನ್ನು ಸಾಕುತ್ತಿದ್ದು ಅವುಗಳ ರಕ್ಷಣೆ ಬಹಳ ಕಷ್ಟವಾಗಿತ್ತು. ರೈತ ಕ್ರಿಯಾ ಯೋಜನೆಯ ಪ್ರಚಾರದ ವೇಳೆ ನರೇಗಾ ಯೋಜನೆಯಡಿಯಲ್ಲಿ ಮೇಕೆ ಶೆಡ್ ನಿರ್ಮಿಸಲು ಅವಕಾಶ ಇದೆ ಎಂಬುದನ್ನು ಮಂಜಮ್ಮ- ವೆಂಕಟೇಶಪ್ಪ ದಂಪತಿ ತಿಳಿದುಕೊಂಡರು. ಪಂಚಾಯಿತಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಿದರು. ಮೇಕೆಶೆಡ್ ಯೋಜನೆಯನ್ನು ಗ್ರಾಮ ಪಂಚಾಯತಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ, ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಲಾಯಿತು.

ನರೇಗಾ ತಾಂತ್ರಿಕ ಸಹಾಯಕರು, ಮಂಜಮ್ಮನ ಮನೆಗೆ ಭೇಟಿ ನೀಡಿ, ಯಾವ ರೀತಿ ಶೆಡ್ ನಿರ್ಮಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಮೇಕೆಶೆಡ್ ಬೇರೆ ಶೆಡ್‍ಗಳಿಗಿಂತ ಭಿನ್ನವಾಗಿರುತ್ತದೆ. ಕಟ್ಟಡ ಮಾದರಿಯ ಶೆಡ್ ಇದಾಗಿದ್ದು, ನೆಲಭಾಗದಿಂದ ಮೇಲ್ಮಟ್ಟದಲ್ಲಿ ಮರ ರಿಪೀಸ್‍ಗಳಿಂದ ಪ್ಲಾಟ್‍ಫಾರಂ ನಿರ್ಮಿಸಿಲಾಗುತ್ತದೆ. ವೈಜ್ಞಾನಿಕವಾದ ಈ ಶೆಡ್‍ನಲ್ಲಿ ಮೇವು ತಿನ್ನಲು, ನೀರು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೇಲೆ ಮೇಕೆ ಇದ್ದರೆ, ಅದರ ಹಿಕ್ಕೆ ಹಾಗೂ ಗಂಜಲ ಕೆಳೆಗೆ ಬೀಳುವಂತೆ ಶೆಡ್ ನಿರ್ಮಾಣ ಮಾಡಲಾಗಿರುತ್ತೆ. ಇದರಿಂದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದ್ದು, ಮೇಕೆಗಳ ಬೆಳವಣಿಗೆ ಸಹಾಕಾರಿಯಾಗಲಿದೆ. ಈ ಮಾದರಿ ಶೆಡ್ ಗ್ರಾಮದಲ್ಲಿ ಇದೇ ಪ್ರಥಮವಾಗಿದ್ದು, ಶೆಡ್ ನಿರ್ಮಾಣಕ್ಕೆ ತಾಂತ್ರಿಕ ಸಿಬ್ಬಂದಿ ನೆರವಿನಿಂದ 25/18 ಅಡಿಯ ಶೆಡ್ ನಿರ್ಮಾಣ ಮಾಡಲಾಯಿತು.

ಈ ಶೆಡ್‌ ನಿರ್ಮಿಸಿದ ನಂತರ ಮಂಜಮ್ಮಗೆ ಈಗ ಚಿರೆತೆ ಹಾಗೂ ಕಳ್ಳರ ಆತಂಕ ದೂರವಾಗಿದ. ಮೇಕೆಗಳಿಗೆ ರಕ್ಷಣೆ ಸಿಕ್ಕಂತಾಗಿದೆ. ಈಗ ಶೆಡ್‍ನಲ್ಲಿ 10ರಿಂದ 15 ಮೇಕೆ ಸಾಕಾಣಿಕೆಗೆ ಅವಕಾಶ ಇದೆ. ಸದ್ಯ ಸಿರೋಹಿ ತಳಿಯ 10 ಮೇಕೆಗಳನ್ನು ಸಾಕುತ್ತಿದ್ದಾರೆ. ತಮ್ಮದೇ ತೋಟದಲ್ಲಿ 20 ಹೆಬ್ಬೇವಿನ ಮರಗಳು ಹಾಗೂ ಸೀಮೇಹುಲ್ಲು ನಾಟಿ ಮಾಡಿದ್ದು, ಅದರಿಂದ ಮೇಕೆಗಳಿಗೆ ಬೇಕಾದ ಮೇವು ದೊರೆಯುತ್ತಿದೆ. ಹೆಚ್ಚಿನ ಶ್ರಮವಿಲ್ಲದೆ ಮನೆಗೆಲಸ ಮಾಡಿಕೊಂಡು ಅದರ ಜೊತೆ ಮಂಜಮ್ಮ ಒಬ್ಬರೇ ಮೇಕೆ ಸಾಕಾಣಿಕೆ ಸಹ ಮಾಡುತ್ತಾರೆ.

ವರ್ಷದಲ್ಲಿ ಎರಡು ಬಾರಿ ಮೇಕೆ ಮಾರಾಟ ಮಾಡಿ ವಾರ್ಷಿಕವಾಗಿ ₹50ರಿಂದ ₹70 ಸಾವಿರ ಆದಾಯ ಪಡೆ
ಯುತ್ತಿದ್ದು, ಮೇಕೆಗಳ ಶೆಡ್‍ನಲ್ಲಿ ಇರುವುದರಿಂದ ಅದರ ಹಿಕ್ಕೆ, ಹಾಗೂ ಗಂಜಲ ಒಂದೇ ಕಡೆ ಶೇಖರಣೆಯಾಗುತ್ತದೆ. ಮೇಕೆ ಹಿಕ್ಕೆಗೆ ಬಹುಬೇಡಿಕೆ ಇದೆ. ಈ ಹಿಕ್ಕೆ ಗೊಬ್ಬರವನ್ನು ತಮ್ಮ ತೋಟಕ್ಕೆ ಬಳಿಕೆ ಮಾಡಿಕೊಳ್ಳುವುದರಿಂದ ವಾರ್ಷಿಕವಾಗಿ ₹10 ಸಾವಿರ ಉಳಿತಾಯವಾಗುತ್ತದೆ ಎನ್ನುತ್ತಾರೆ ರೈತ ಮಹಿಳೆ ಮಂಜಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT