ಸೋಮವಾರ, ಜೂನ್ 14, 2021
27 °C
ಸರ್ಕಾರಿ ನೌಕರರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಕಿವಿಮಾತು

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಮಹಾಮಾರಿ ವಿರುದ್ಧ ಸಮರ ಸಾರಿರುವ ಸರ್ಕಾರದ ಮಾರ್ಗಸೂಚಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸರ್ಕಾರಿ ನೌಕರರು ತಮ್ಮ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಕಿವಿಮಾತು ಹೇಳಿದರು.

ಸಿಲ್ವರ್ ಕ್ರಸ್ಟ್ ಗಾರ್ಮೆಂಟ್ಸ್ ಕಂಪನಿಯು ಕೊಡುಗೆಯಾಗಿ ನೀಡಿರುವ 10 ಸಾವಿರ ಮಾಸ್ಕ್‌ಗಳನ್ನು ಇಲ್ಲಿ ಬುಧವಾರ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ವಿತರಿಸಿ ಮಾತನಾಡಿ, ‘ಸರ್ಕಾರದ ವಿವಿಧ ಇಲಾಖೆಗಳ ನೌಕರರು ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ವ್ಯವಹರಿಸಲು ಸಂಬಂಧಿಕರೇ ಹಿಂಜರಿಯುವುದನ್ನು ನೋಡಿದ್ದೇವೆ. ಆದರೆ, ಆರೋಗ್ಯ ಇಲಾಖೆ ನೌಕರರು, ವೈದ್ಯರು, ಶುಶ್ರೂಷಕಿಯರು ಸೋಂಕು ಲೆಕ್ಕಿಸದೆ ಸೇವೆ ಮಾಡುತ್ತಿದ್ದಾರೆ. ನೌಕರರು ಜನಸೇವೆಯ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ನೌಕರರು ಪ್ರತಿನಿತ್ಯ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಹತ್ವವನ್ನು ತಿಳಿಸಿ ಹೇಳಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಗಳಿಗೆ ನೌಕರರು ಸಹಕರಿಸುತ್ತಿದ್ದೇವೆ. ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಲು ಸಾರ್ವಜನಿಕರು ಸ್ಪಂದಿಸಬೇಕು’ ಎಂದರು.

ಜಾಗೃತರಾಗಿ: ‘ಈಗಾಗಲೇ ಸಾಕಷ್ಟು ಸರ್ಕಾರಿ ನೌಕರರು ಕೋವಿಡ್ ಮಾರಿಗೆ ಬಲಿಯಾಗಿದ್ದಾರೆ. ಇಂತಹ ಸಾವು ನೋವು ತಡೆಯಲು ಎಲ್ಲರೂ ಜಾಗೃತರಾಗಬೇಕು. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ. ಜನರು ಕೋವಿಡ್ ಭೀಕರತೆ ಅರಿತು ಸರ್ಕಾರಿ ನೌಕರರೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಸೋಂಕಿತರ ಸಂಖ್ಯೆ ಏರಿಕೆಯಿಂದಾಗಿ ಜಿಲ್ಲೆಯಲ್ಲಿ ಬೆಡ್ ಮತ್ತು ವೈದ್ಯಕೀಯ ಆಮ್ಲಜನಕದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ ಸಕಲ ರೀತಿಯಲ್ಲೂ ಶ್ರಮಿಸುತ್ತಿದ್ದಾರೆ. ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ದೃಢ ಸಂಕಲ್ಪ ಮಾಡೋಣ’ ಎಂದು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ವಿಜಯ್‌, ಉಪಾಧ್ಯಕ್ಷ ಸುಬ್ರಮಣಿ, ರಾಜ್ಯ ಪರಿಷತ್ ಸದಸ್ಯ ಗೌತಮ್, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಅಜಯ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.