ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮುಕ್ತ ಜಿಲ್ಲೆಗೆ ಸಂಕಲ್ಪ ಮಾಡಿ: ಅರವಿಂದ ಲಿಂಬಾವಳಿ ಕಿವಿಮಾತು

ಪಕ್ಷದ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ
Last Updated 12 ಮೇ 2021, 13:12 IST
ಅಕ್ಷರ ಗಾತ್ರ

ಕೋಲಾರ: ‘ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜಿಲ್ಲೆಯನ್ನು ಕೋವಿಡ್‌ ಮುಕ್ತ ಜಿಲ್ಲೆಯಾಗಿ ಮಾಡಲು ದೃಢ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕಿವಿಮಾತು ಹೇಳಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಇಡೀ ದೇಶ ಕೋವಿಡ್‌ನಿಂದ ತಲ್ಲಣಗೊಂಡಿದೆ. ಕಾರ್ಯಕರ್ತರು ಯಾವುದೇ ರಾಜಕೀಯ ಲಾಭದ ಅಪೇಕ್ಷೆಯಿಲ್ಲದೆ ಸೇವಾ ಮನೋಭಾವದಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌ 2ನೇ ಅಲೆಯಿಂದ ದೇಶದಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿವೆ. ಜತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಅಕ್ಟೋಬರ್‌ ವೇಳೆಗೆ ಕೋವಿಡ್‌ 3ನೇ ಅಲೆ ಬರುತ್ತದೆ ಎಂದು ತಜ್ಞರ ಸಮಿತ ವರದಿ ನೀಡಿದೆ. ಹೀಗಾಗಿ ಕೋವಿಡ್‌ 2ನೇ ಅಲೆಯ ಸವಾಲು ಎದುರಿಸುವ ಜತೆಗೆ 3ನೇ ಅಲೆಯ ಸಮರ್ಥ ನಿರ್ವಹಣೆಗೆ ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲೂ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದೆ. ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಜನರಿಗೆ ಜಾಗೃತಿ ಮೂಡಿಸಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದ್ದು, ಜನರ ಸಮಸ್ಯೆ ಗುರುತಿಸಿ ಪರಿಹರಿಸುವ ಪ್ರಯತ್ನ ಮಾಡಿ’ ಎಂದು ಸೂಚಿಸಿದರು.

ಅಪಪ್ರಚಾರ: ‘ಕೋವಿಡ್‌ ಲಸಿಕೆ ಬಗ್ಗೆ ವಿಪಕ್ಷದವರು ಈ ಹಿಂದೆ ಅಪಪ್ರಚಾರ ಮಾಡಿದರು. ಇದರಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಹೀಗಾಗಿ ಕೋವಿಡ್ 2ನೇ ಅಲೆ ತೀವ್ರತೆ ಹೆಚ್ಚಿದೆ. ಈಗ ಜನರಿಗೆ ಸತ್ಯದ ಅರಿವಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಜನರು ಹಿಂದೆಯೇ ಸ್ವಪ್ರೇರಣೆಯಿಂದ ಲಸಿಕೆ ಹಾಕಿಸಿಕೊಂಡಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜನರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಗುಣಮುಖರಾದರೆ ಮನೆಗಳಿಗೆ ಹೋಗಬೇಕು. ಜನರು ಕೋವಿಡ್‌ ಲಕ್ಷಣ ಕಾಣಿಸಿಕೊಂಡರೆ ಭಯಪಡದೆ ಪರೀಕ್ಷೆ ಮಾಡಿಸಿಕೊಂಡು ತಮ್ಮ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರ ಪ್ರಾಣ ರಕ್ಷಣೆ ಮಾಡಬೇಕು’ ಎಂದು ಕೋರಿದರು.

ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT