ಮಂಗಳವಾರ, ಆಗಸ್ಟ್ 3, 2021
23 °C
ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ

ಎಸ್‌ಸಿಪಿ–ಟಿಎಸ್‌ಪಿ ಅನುದಾನ ಸದ್ಬಳಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ನೀಡುತ್ತಿರುವ ಅನುದಾನ ಸದ್ಬಳಕೆ ಆಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಅನುದಾನದ ಸೌಲಭ್ಯ ತಲುಪಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) 1978ರಲ್ಲಿ ಜಾರಿಗೆ ಬಂದಿತು. ಸರ್ಕಾರದಿಂದ ಎಸ್ಸಿ, ಎಸ್‌ಟಿ ಫಲಾನುಭವಿಗಳಿಗೆ ಮಂಜೂರಾದ ಭೂಮಿ ಕನಿಷ್ಠ 15 ವರ್ಷ ಇತರರಿಗೆ ಪರಭಾರೆ ಆಗಬಾರದು ಎಂಬುದು ಈ ಕಾಯ್ದೆ ಉದ್ದೇಶ’ ಎಂದರು.

‘ಜಮೀನು ಮಂಜೂರಾತಿ ಪಡೆದವರು ಭೂ ಇಡುವಳಿಯಿಂದ ವಂಚಿತರಾಗಬಾರದು. ಈಗಾಗಲೇ 1ರಿಂದ 5ರವರೆಗಿನ ದುರಸ್ತಿ ಕಾರ್ಯ ಮಾಡುತ್ತಿದ್ದು, ಮೊದಲ ಹಂತದಲ್ಲಿ ಎಲ್ಲಾ ದಾಖಲೆಪತ್ರ ಸರಿಯಿರುವ ದರಖಾಸ್ತು ಜಮೀನು ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ. ಸಾಗುವಳಿ ಚೀಟಿ ಇಲ್ಲದವರ ಪಟ್ಟಿ ತಯಾರಿಸಿ ಕಾನೂನು ಪ್ರಕಾರ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು’ ಎಂದು ವಿವರಿಸಿದರು.

‘ಸರ್ಕಾರಿ ಸೌಲಭ್ಯಗಳ ಉದ್ದೇಶಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಫಲಾನುಭವಿಗಳ ಪಟ್ಟಿಯನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿ ಕಳುಹಿಸಬೇಕು. ಇದರಿಂದ ಕೆಲ ಫಲಾನುಭವಿಗಳು ಸಾಲಕ್ಕೆ ಅರ್ಹರಿಲ್ಲದಿದ್ದರೆ, ಉಳಿದ ಫಲಾನುಭವಿಗಳನ್ನು ಪರಿಗಣಿಸಲು ಅನುಕೂಲವಾಗುತ್ತದೆ. ಇದರಿಂದ ಸರ್ಕಾರದ ಯೋಜನೆಗಳು ವ್ಯರ್ಥವಾಗದೆ ಫಲಾನುಭವಿಗಳನ್ನು ತಲುಪುತ್ತವೆ’ ಎಂದು ಸಲಹೆ ನೀಡಿದರು.

ಸ್ವಾಗತಾರ್ಹ: ‘ನಗರಸಭೆ ಮಳಿಗೆಗಳಲ್ಲಿ ಎಸ್ಸಿ, ಎಸ್‌ಟಿ ಜನಾಂಗದವರಿಗೆ 50 ಅಂಗಡಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಕೈಗಾರಿಕೆಗಳ ಸ್ಥಾಪನೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಾಲ ನೀಡಲು ಅವಕಾಶವಿದೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಸಾಲ ನೀಡಲು ಹಿಂದೇಟು ಹಾಕುತ್ತಾರೆ’ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅಂಬರೀಶ್ ದೂರಿದರು.

‘ಜವಳಿ ಇಲಾಖೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಾಲ ನೀಡಲು ಅವಕಾಶವಿದೆ. ಆದರೆ, ಈವರೆಗೂ ಯಾವುದೇ ಫಲಾನುಭವಿಗೆ ಸಾಲ ಸೌಲಭ್ಯ ದೊರೆತಿಲ್ಲ. ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಬಾಬು ಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದು, ಶೀಘ್ರವೇ ಭವನ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ಪ್ರಕರಣದಲ್ಲಿ ಸೋಲು: ‘ದೌರ್ಜನ್ಯ ಪ್ರಕರಣಗಳಲ್ಲಿ ಶೇ 80ರಷ್ಟು ಭೂ ವ್ಯವಹಾರಕ್ಕೆ, ಶೇ 15ರಷ್ಟು ನೀರಿಗೆ ಹಾಗೂ ಶೇ 5ರಷ್ಟು ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿವೆ. ಜನರಲ್ಲಿ ಅರಿವು ಮೂಡಿರುವುದರಿಂದ ದೌರ್ಜನ್ಯ ಪ್ರಕರಣ ಕಡಿಮೆಯಾಗುತ್ತಿವೆ. ಕೆಲ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷ್ಯಾಧಾರ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ರ ಸಹಕಾರವಿಲ್ಲದೆ ಸೋಲಾಗುತ್ತಿದೆ’ ಎಂದು ಸಮಿತಿ ಸದಸ್ಯ ವೆಂಕಟರಾಮು ಅಸಮಾಧಾನ ವ್ಯಕ್ತಪಡಿಸಿದರು.

‘ಮೂಲ ಫಲಾನುಭವಿಗಳಿಗೆ ಜಮೀನು ದೊರೆಯದೆ ಘರ್ಷಣೆ ನಡೆದು ದೌರ್ಜನ್ಯ ಪ್ರಕರಣ ದಾಖಲಾಗುತ್ತವೆ. ಜಮೀನು ಪ್ರಕರಣಗಳು ಇತ್ಯರ್ಥವಾದರೆ ಶೇ 80ರಷ್ಟು ದೌರ್ಜನ್ಯ ಪ್ರಕರಣ ಕಡಿಮೆಯಾಗುತ್ತವೆ’ ಎಂದು ಸಲಹೆ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ ದರ್ಶನ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ, ಮಹಮ್ಮದ್ ಸುಜಿತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು