ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು |'ನಕಲಿ ಕಟ್ಟಡ ಕಾರ್ಮಿಕರ ನೋಂದಣಿ ರದ್ಧತಿಗೆ ಸೂಚನೆ'

Published 7 ಮಾರ್ಚ್ 2024, 15:22 IST
Last Updated 7 ಮಾರ್ಚ್ 2024, 15:22 IST
ಅಕ್ಷರ ಗಾತ್ರ

ಮಾಲೂರು: ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ನೋಂದಣಿಯಾಗಿದ್ದು, ಇಂತಹ ನಕಲಿ ಕಾರ್ಮಿಕರು ತಾವೇ ಖುದ್ದಾಗಿ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಮೂಲ ಗುರುತಿನ ಚೀಟಿ ಹಿಂತಿರುಗಿಸಿ ತಮ್ಮ ನೋಂದಣಿ ರದ್ದುಪಡಿಸಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ನಿರೀಕ್ಷಕ ರೇಣುಕಾ ಪ್ರಸನ್ನ ತಿಳಿಸಿದರು.

ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕಲ್ಯಾಣ ಮಂಡಳಿ ವತಿಯಿಂದ ನಕಲಿ ಕಟ್ಟಡ ಕಾರ್ಮಿಕರಲ್ಲದವರನ್ನು ಪತ್ತೆ ಹಚ್ಚಲು ರಾಜ್ಯದಾದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲೂ ಪರಿಶೀಲನೆ ನಡೆಯುತ್ತಿದೆ. ಪರಿಶೀಲನೆ ಸಮಯದಲ್ಲಿ ನಕಲಿ ಕಟ್ಟಡ ಕಾರ್ಮಿಕರು ಕಂಡು ಬಂದರೆ ಅವರ ನೋಂದಣಿಯನ್ನು ರದ್ದುಪಡಿಸಿ ಇಲ್ಲಿಯವರೆಗೆ ಮಂಡಳಿಯಿಂದ ಪಡೆದ ಎಲ್ಲಾ ಸೌಲಭ್ಯಗಳನ್ನು ದಂಡ ಸಹಿತ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕಾರ್ಮಿಕ ಇಲಾಖೆಯು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕರ್ನಾಟಕ ರಾಜ್ಯ ಗೀಗ್ ಕಾರ್ಮಿಕರ ವಿಮಾ ಯೋಜನೆಯನ್ನು ಮೊದಲ ಬಾರಿಗೆ ಅನುಷ್ಠಾನಗೊಳಿಸಿದೆ. ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಿಗ್ಗಿ, ಜಮೊಟೊ, ಫುಡ್‌ ಡೆಲವರಿ ಹಾಗೂ ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್‌, ಪೋರ್ಟರ್‌ ಫಾರ್ಮಸಿ, ಬಿಗ್ ಬಾಸ್ಕೆಟ್‌, ಡಯನಾಮಿಕ್ ಮುಂತಾದ ಸಂಸ್ಥೆಗಳಲ್ಲಿ ಡೆಲವರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು.

ವಿಮೆಯು ಅಪಘಾತದಿಂದ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ ₹2 ಲಕ್ಷ ಹಾಗೂ ಜೀವ ವಿಮೆ ₹2 ಲಕ್ಷ ಸೇರಿ ಒಟ್ಟು ₹4 ಲಕ್ಷ ಪರಿಹಾರ ನೀಡಲಾಗುತ್ತದೆ. ಅಪಘಾತದಿಂದ ದುರ್ಬಲತೆ ಹೊಂದಿದ್ದಲ್ಲಿ ₹2 ಲಕ್ಷ ಆಸ್ಪತ್ರೆ ವೆಚ್ಚ ಮರು ಪಾವತಿ, ₹1 ಲಕ್ಷ ಜೀವ ವಿಮೆ ನೀಡಲಾಗುವುದು. ₹2 ಲಕ್ಷ ನೋಂದಣಿಗೆ 18 ರಿಂದ 60 ವಯೋಮಾನವರಾಗಿದ್ದು, ಆದಾಯ ತೆರಿಗೆ ಪಾವತಿಸಬಾರದವರು ಆಗಿರಬೇಕು. ಭವಿಷ್ಯ ನಿಧಿ ಹಾಗೂ ಇಎಸ್‌ಐ ಪಲಾನುಭವಿಗಳಾಗಿರಬಾರದು. ಕಾರ್ಯ ನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಹಿಸುತ್ತದೆ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT