ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿಶೇಷ ಪ್ಯಾಕೇಜ್‌ ಸಾಲದು

ನಿಯೋಗ ಹೋಗುತ್ತೇವೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
Last Updated 6 ಮೇ 2020, 19:45 IST
ಅಕ್ಷರ ಗಾತ್ರ

ಮಾಲೂರು: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಯಾವುದಕ್ಕೂ ಸಾಲದು. ಎಲ್ಲ ಸಾಂಪ್ರದಾಯಿಕ ಕಸಬುದಾರರಿಗೆ ಸಹಾಯಧನ ನೀಡಬೇಕು’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಅಂಗನವಾಡಿ ಮತ್ತು ಆಶಾ ಕಾರ್ಯ ಕರ್ತೆಯರು, ಪೌರ ಕಾರ್ಮಿಕರು ಸೇರಿದಂತೆ ಸುಮಾರು 5 ಸಾವಿರ ಕೊರೊನಾ ವಾರಿಯರ್ಸ್‌ಗೆ ಶಾಸಕ ಕೆ.ವೈ.ನಂಜೇಗೌಡರು ತಾಲ್ಲೂಕಿನ ಕೊಮ್ಮನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದೆಲ್ಲೆಡೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದು, ಕಾರ್ಮಿಕರು ಸೇರಿದಂತೆ ಎಲ್ಲ ಸಾಂಪ್ರದಾಯಿಕ ವೃತ್ತಿ ಮಾಡುವವರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇವರ ಅಭಿಪ್ರಾಯ ಆಧರಿಸಿ ಲಾಕ್‌ಡೌನ್‌ ಸಂಕಷ್ಟ ನಿವಾರಣೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು’ ಎಂದು ವಿವರಿಸಿದರು.

‘ಸರ್ಕಾರ ಸವಿತಾ ಸಮಾಜ, ಆಟೊ ಮತ್ತು ಟಾಕ್ಸಿ ಚಾಲಕರು, ಮಡಿವಾಳ ಸಮಾಜದವರಿಗೆ ಹಾಗೂ ನೇಕಾರರಿಗೆ ₹5 ಸಾವಿರ ಸಹಾಯಧನ ಘೋಷಿಸಿರುವುದು ಒಳ್ಳೆಯ ನಿರ್ಧಾರ. ಆದರೆ, ಸಾಕಷ್ಟು ಜನರನ್ನು ಪ್ಯಾಕೇಜ್‌ ನಿಂದ ಕೈಬಿಟ್ಟಿರುವುದು ಸರಿಯಿಲ್ಲ. ಅವರಿಗೂ ಆರ್ಥಿಕ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯದೆಲ್ಲೆಡೆ ಪ್ರವಾಸ: ‘ರೈತರ ಸಂಕಷ್ಟ ಅರಿಯಲು ನಾನು ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡಿದ್ದೇನೆ. ಆನೇಕಲ್ ತಾಲ್ಲೂಕಿನಲ್ಲಿ ಹೂವು ಬೆಳೆದಿರುವ ರೈತರಿಗೆ ಲಾಕ್‌ಡೌನ್‌ನಿಂದ ಸುಮಾರು ₹500 ಕೋಟಿ ನಷ್ಟವಾಗಿದೆ. ಮಾಲೂರು ತಾಲ್ಲೂಕಿನಲ್ಲಿ ರೈತರು ಬೆಳೆದಿರುವ ತರಕಾರಿ, ಹಣ್ಣು, ಹೂವು ಖರೀದಿಯಾಗದೆ ತೋಟದಲ್ಲೇ ಕೊಳೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನ ವಿಚಾರವಾಗಿ 21 ಬೇಡಿಕೆ ಸರ್ಕಾರದ ಮುಂದಿಟ್ಟಿದ್ದೇವೆ. 45 ದಿನಗಳಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ರೈತರ ಬೆಳೆಗಳಿಗೆ ಸರ್ಕಾರ ಬೆಲೆ ನಿಗದಿಪಡಿಸಬೇಕು. ಹೆಚ್ಚಿನ ಸಹಾಯಧನ ಘೋಷಣೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗುತ್ತೇವೆ’ ಎಂದರು.

ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಮತ್ತು ಮಹಿಳಾ ಪೌರ ಕಾರ್ಮಿಕರಿಗೆ ಅರಿಶಿನ ಕುಂಕುಮ, ಬಳೆಯ ಜತೆಗೆ ಸೀರೆ ಮತ್ತು ಆಹಾರ ಪದಾರ್ಥ ವಿತರಣೆ ಮಾಡಲಾಯಿತು. ಶಾಸಕರಾದ ಕೆ.ವೈ.ನಂಜೇಗೌಡ, ಬೈರತಿಸುರೇಶ್, ಅಜಯ್‌ಸಿಂಗ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಮುನಿಯಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT