ಭಾನುವಾರ, ಏಪ್ರಿಲ್ 18, 2021
32 °C
ತಜ್ಞರ ಸಲಹೆ

ಮಾವಿಗೆ ವಿಶೇಷ ಕಾಳಜಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಅಕಾಲಿಕ ಮಳೆಯಿಂದ ಮಾವಿನ ಹೂ ಉದುರಿ ಉಂಟಾಗಿರುವ ನಷ್ಟ ತುಂಬಿಕೊಳ್ಳಲು, ಮಾವು ಬೆಳೆಗಾರರು ವಿಶೇಷ ಕಾಳಜಿ ವಹಿಸಬೇಕು ಎಂದು ಹೊಗಳಗೆರೆ ತೋಟಗಾರಿಕಾ
ಅಭಿವೃದ್ಧಿ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಹೇಳಿದರು.

ತಾಲ್ಲೂಕಿನ ಕೆಲವು ಗ್ರಾಮಗಳ ಸಮೀಪ ಗುರುವಾರ ಮಾವಿನ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ, ದಳಸನೂರು ಗ್ರಾಮದ ಸಮೀಪ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಅವರ ಮಾವಿನ ತೋಟದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ನೈಸರ್ಗಿಕ ವಿಕೋಪ ಸಂಭವಿಸಿದಾಗ, ಇರುವ ಫಸಲನ್ನು ಜೋಪಾನವಾಗಿ ನೋಡಿಕೊಂಡಲ್ಲಿ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಸಬಾ ಹೋಬಳಿ, ಯಲ್ದೂರು ಮತ್ತಿತರ ಕೆಲವು ಕಡೆಗಳಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಬೆಳೆ ಘಾಸಿಗೊಂಡಿದೆ. ಆದರೂ ಮರದಲ್ಲಿ ಹೀಚು ಕಚ್ಚಿರುವ ಕಡೆ ಹಾನಿಯ ಪ್ರಮಾಣ ಕಡಿಮೆ ಇದೆ. ಈಗ ಇರುವ ಪಿಂದೆ ಉತ್ತಮ ಗುಣ
ಮಟ್ಟದ ಕಾಯಿಯಾಗಿ ಬೆಳೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಸಿಂಪಡಣೆ: ಮಾವಿನ ಹೀಚು ಗೋಲಿ ಗಾತ್ರ ಇರುವಾಗ ಮ್ಯಾಂಗೋ ಸ್ಪೆಷಲ್ ಔಷಧವನ್ನು ಒಂದು ಲೀಟರ್ ನೀರಿಗೆ 5 ಗ್ರಾಂನಂತೆ ಬೆರೆಸಿ, ಅದಕ್ಕೆ ಒಂದು ದೊಡ್ಡ ಗಾತ್ರದ ನಿಂಬೆ ಹಣ್ಣಿನ ರಸ ಹಾಗೂ 25 ಲೀಟರ್ ನೀರಿಗೆ ಒಂದು ಚಿಕ್ಕ ಸ್ಯಾಸೆಟ್ ಸ್ಯಾಂಪೋ ಸೇರಿಸಿ ಸಿಂಪರಣೆ ಮಾಡಬೇಕು. ಹಾಗೆ ಮಾಡುವುದರಿಂದ ಮರದಲ್ಲಿನ ಎಲ್ಲ ಕಾಯಿ ಒಂದೇ ಗಾತ್ರ ಬೆಳೆಯಲು ಸಾಧ್ಯವಾಗುತ್ತದೆ. ಗುಣಮಟ್ಟವೂ ಹೆಚ್ಚುತ್ತದೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಎಕ್ಸಾಕೋನಾಜೋಲ್ ಔಷಧಿಯನ್ನು 1 ಲೀಟರ್ ನೀರಿಗೆ 2 ಗ್ರಾಂನಂತೆ ಬೆರೆಸಿ ಸಿಂಪರಣೆ ಮಾಡುವುದು ಒಳ್ಳೆಯದು. ಜಿಗಿ ಹುಳುವಿನ ಬಾಧೆ ಕಂಡುಬಂದಲ್ಲಿ 1 ಲೀಟರ್ ನೀರಿಗೆ ಅರ್ಧ ಗ್ರಾಂ ಲ್ಯಾಮ್ಡಾ ಪಯಲೋಥಿಲ್ ಸೇರಿಸಿ ಮರದ ಎಲ್ಲ ಭಾಗಕ್ಕೆ ಬೀಳುವಂತೆ ಸಿಂಪಡಣೆ ಮಾಡಬೇಕು ಎಂದು ಸಲಹೆ ಮಾಡಿದರು.

ಮಾವು ತಾಲ್ಲೂಕಿನ ಜನರ ಜೀವನಾಡಿಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಮಾವಿನ ಬೆಳೆ ಸೂಕ್ಷ್ಮ ಬೆಳೆಯಾಗಿ ಮಾರ್ಪಟ್ಟಿದೆ. ಮಾವು ಬೆಳೆಯ ವಿವಿಧ ಹಂತಗಳಲ್ಲಿ ವಿವಿಧ ರೋಗ ಹಾಗೂ ಹುಳು ಬಾಧೆ ಕಾಡುತ್ತಿದೆ. ಬೆಳೆಯನ್ನು ರೋಗ ಮತ್ತು ಕೀಟಗಳಿಂದ ಮುಕ್ತ
ಗೊಳಿಸಿದಾಗ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮಾತನಾಡಿ, ಮಾವಿನ ಬೆಳೆ ರಕ್ಷಣೆಯಲ್ಲಿ ವಿಜ್ಞಾನಿಗಳ ಪಾತ್ರ ಹಿರಿದು. ಇಲ್ಲಿನಹೊಗಳಗೆರೆ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಹಾಗೂ ಸಹ ವಿಜ್ಞಾನಿಗಳು ತಾಲ್ಲೂಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಂತ ಹಂತವಾಗಿ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಅಗತ್ಯವಾದ ಸಲಹೆ ಸೂಚನೆ ನೀಡುತ್ತಿದ್ದಾರೆ. ರೈತರು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.

ತೋಟಗಾರಿಕಾ ವಿಜ್ಞಾನಿಗಳಾದ ಡಾ. ಬಿ.ಆಂಜನೇಯರೆಡ್ಡಿ, ಡಾ. ಬಿ.ಎನ್.ರಾಜೇಂದ್ರ ಮಾವಿನ ಹೂ ಮತ್ತು ಫಸಲು ರಕ್ಷಣೆಗೆ ಕೈ
ಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.