ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯ ಮನೆಮನೆಗೂ ಮಂತ್ರಾಕ್ಷತೆ- ವಿಶ್ವ ಹಿಂದೂ ಪರಿಷದ್‌

Published 30 ಡಿಸೆಂಬರ್ 2023, 15:49 IST
Last Updated 30 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ಕೋಲಾರ: ‘ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಜ. 22 ರಂದು ಶ್ರೀರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠಾಪನೆ ಆಗಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಜಿಲ್ಲೆಯ ಮನೆಮನೆಗೂ ಮಂತ್ರಾಕ್ಷತೆ ವಿತರಣೆ ಮಾಡಲಾಗುವುದು’ ಎಂದು ವಿಶ್ವ ಹಿಂದೂ ಪರಿಷದ್‌ನ ಕೋಲಾರ ವಿಭಾಗದ ಕಾರ್ಯದರ್ಶಿ ತ.ನಂ.ಗೌರಿಶಂಕರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು ಐದು ನೂರು ಇತಿಹಾಸ ಇರುವಂಥ ರಾಮ ಜನ್ಮಭೂಮಿ ಸುಪ್ರೀಂ ಕೋರ್ಟ್ ಆದೇಶದಂತೆ ನಮಗೆ ದೊರೆತಿದ್ದು, ಭಕ್ತರು ಸಮರ್ಪಣೆ ಮಾಡಿದ ಹಣದಿಂದಲೇ ಈ ಭವ್ಯ ಮಂದಿರ ನಿರ್ಮಾಣ ನಡೆಯುತ್ತಿದೆ. ಮಂದಿರ ಸ್ಥಾಪನೆಗೆ ಮುನ್ನ ಭಾರತದ ಗ್ರಾಮ ಗ್ರಾಮಗಳಲ್ಲಿರುವ ಪ್ರತಿ ಹಿಂದೂ ಮನೆಗೆ ರಾಮನ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ವಿಶ್ವ ಹಿಂದೂ ಪರಿಷದ್, ಪರಿಷದ್ ಪರವಾರದ ಎಲ್ಲಾ ಸಂಘಟನೆಗಳು ಮತ್ತು ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ,ಶ್ರೀರಾಮ ಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು ತಲುಪಿಸುವ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಅಭಿಯಾನ ವಿಭಾಗದ ಸಂಯೋಜಕ ಸಿದ್ದಲಿಂಗೇಶ್ವರ ಮಾತನಾಡಿ, ‘ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಜಿಲ್ಲೆಗಳಲ್ಲಿ 9ಲಕ್ಷ 57 ಸಾವಿರದ 800 ಮನೆಗಳ 38 ಲಕ್ಷ ಮಂದಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 24 ಸಾವಿರ ಮಂದಿ ಕಾರ್ಯಕರ್ತರಿಂದ ಸ್ವ ಇಚ್ಛೆಯಿಂದ ಮುಂದೆ ಬಂದಿದ್ದಾರೆ’ ಎಂದರು.

‘22 ರಂದು ರಾಷ್ಟ್ರದ ಹಬ್ಬವಾಗಿದೆ. ಅಂದು ವಿಶೇಷ ಪೂಜೆಯ ನಂತರ ಸಂಜೆ ಪ್ರತಿ ಮನೆಯಲ್ಲೂ 5 ದೀಪಗಳನ್ನು ಹಚ್ಚಿ ಉತ್ತರ ದಿಕ್ಕಿನಲ್ಲಿ ಬೆಳಗುವ ಮೂಲಕ ದೀಪಾವಳಿಯ ಹಬ್ಬದ ಮಾದರಿಯಲ್ಲಿ ಆಚರಿಸುವಂತಾಗಬೇಕು’ ಎಂದು ನುಡಿದರು.

‘ಕೋಲಾರದ ನಾಗಲಾಪುರ ಮಠದ ತೇಜೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರಿ ಸ್ವಾಮೀಜಿಗಳನ್ನು ಅಯೋಧ್ಯೆ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ವಿಭಾಗ ಸಹ ಸಂಯೋಜಕ ಹೋ.ನಾ.ಶೇಷಾ, ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ.ಶಿವಣ್ಣ, ಅಭಿಯಾನದ ಗೋವಿಂದರಾಜು, ಅಭಿಯಾನದ ಜಿಲ್ಲಾ ಸಂಚಾಲಕ ಬಾಬು, ಅಭಿಯಾನದ ಜಿಲ್ಲಾ ಸಂಯೋಜಕ ಜಗದೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT