ಗುರುವಾರ , ಫೆಬ್ರವರಿ 25, 2021
17 °C

ಕೋಲಾರ: ವಿದ್ಯಾರ್ಥಿಗಳು– ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ’ ಎಂದು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಮುಖ್ಯ ಅಧೀಕ್ಷಕರ ಸಭೆಯಲ್ಲಿ ಮಾತನಾಡಿ, ‘ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ. ಜಿಲ್ಲೆಯಲ್ಲಿ ಸುಗಮ ಪರೀಕ್ಷೆಗೆ ಎಲ್ಲಾ ಮುಖ್ಯ ಅಧೀಕ್ಷಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಸೋಂಕು ತಡೆಗೆ ಇಲಾಖೆ ರೂಪಿಸಿರುವ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆ, ಸ್ವಚ್ಛತೆಗೆ ಒತ್ತು ನೀಡಿ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರಗಿನವರಿಗೆ ಕೇಂದ್ರಕ್ಕೆ ಅವಕಾಶ ನೀಡಬಾರದು’ ಎಂದು ತಿಳಿಸಿದರು.

‘ಸುಗಮ ಪರೀಕ್ಷೆ ನಡೆಸುವುದು ಎಷ್ಟು ಮುಖ್ಯವೋ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಣೆ ಮಾಡುವುದು ಸಹ ಅಷ್ಟೇ ಮುಖ್ಯ. ಪರೀಕ್ಷೆ ಮುಗಿದ ನಂತರ ಪ್ರತಿನಿತ್ಯ ಕೊಠಡಿಯನ್ನು ಸ್ಯಾನಿಟೈಸರ್ ಮಾಡಬೇಕು’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹೇಳಿದರು.

‘ಪ್ರತಿ ಕೊಠಡಿಯಲ್ಲಿ 20 ಮಕ್ಕಳಿಗೆ ಮಾತ್ರ ಅವಕಾಶ ನೀಡಿ. ಡೆಸ್ಕ್ ನಡುವೆ 3 ಅಡಿ ಅಂತರ ಇರಬೇಕು. ಕೊಠಡಿಗಳು ಸಾಲದಿದ್ದರೆ ಹೆಚ್ಚುವರಿ ಕೊಠಡಿ ಬಳಸಿಕೊಳ್ಳಿ. ಅದೂ ಸಾಕಾಗದಿದ್ದರೆ ಪಕ್ಕದ ಶಾಲೆಯನ್ನು ಬ್ಲಾಕ್ ಆಗಿ ಪರಿಗಣಿಸಿ ಅಲ್ಲೂ ಪರೀಕ್ಷೆ ನಡೆಸಿ’ ಎಂದು ಸಲಹೆ ನೀಡಿದರು.

ತಪಾಸಣೆ ಕಡ್ಡಾಯ

‘ಕೊರೊನಾ ಸೋಂಕಿನ ಗಂಭೀರತೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿನ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ದೇಹದ ಉಷ್ಣತೆ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಜ್ವರ, ನೆಗಡಿ ಲಕ್ಷಣವಿರುವ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದು. ಪರೀಕ್ಷಾ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಶೌಚಾಲಯಗಳನ್ನು ಪ್ರತಿನಿತ್ಯ ಸ್ಯಾನಿಟೈಸರ್ ಮಾಡಿಸಬೇಕು’ ಎಂದರು.

‘ಮಕ್ಕಳು ಗುಂಪು ಗುಂಪಾಗಿ ಪರೀಕ್ಷಾ ಕೇಂದ್ರಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿ ಸಂಖ್ಯೆ ಗಮನಿಸಲು ಅನುಕೂಲವಾಗುವಂತೆ ಮೂರ್ನಾಲ್ಕು ಕಡೆ ಸೂಚನಾ ಫಲಕ ಹಾಕಬೇಕು’ ಎಂದು ತಿಳಿಸಿದರು.

ಮಾಲೂರು ಬಿಇಒ ಮಾಧವರೆಡ್ಡಿ, ಬಂಗಾರಪೇಟೆ ಬಿಇಒ ಕೆಂಪಯ್ಯ, ಮುಳಬಾಗಿಲು ಬಿಇಒ ಸಿದ್ದರಾಜು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು