ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಕೊರತೆ ನೀಗಿಸಲು ಕ್ರಮ

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್‌ಕುಮಾರ್‌ ಭರವಸೆ
Last Updated 28 ಡಿಸೆಂಬರ್ 2019, 14:51 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯರ ಖಾಲಿ ಹುದ್ದೆಗಳನ್ನು ಸದ್ಯದಲ್ಲೇ ಭರ್ತಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಭರವಸೆ ನೀಡಿದರು.

‘ಪ್ರಜಾವಾಣಿ’ಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೆಲ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ನರ್ಸ್‌ಗಳ ಕೊರತೆಯಿದೆ. ಹೆಚ್ಚಿನ ವೇತನ ಕೊಟ್ಟರೂ ವೈದ್ಯರು ಸರ್ಕಾರಿ ಸೇವೆಗೆ ಬರಲು ಹಿಂದೇಟು ಹಾಕುತ್ತಾರೆ’ ಎಂದು ಹೇಳಿದರು.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸತತ ಎರಡು ತಾಸು ಜಿಲ್ಲೆಯ ಮೂಲೆ ಮೂಲೆಯಿಂದ ಸಾರ್ವಜನಿಕರು ಕರೆ ಮಾಡಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಅಳಲು ತೋಡಿಕೊಂಡರು. ಡಿಎಚ್‌ಒ ಡಾ.ವಿಜಯ್‌ಕುಮಾರ್‌, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್‌ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.

ಜನರ ಪ್ರಶ್ನೆಗಳಿಗೆ ವಿಜಯ್‌ಕುಮಾರ್‌ ಅವರು ನೀಡಿದ ಉತ್ತರ ಕೆಳಗಿನಂತಿದೆ.

* ಎಸ್‌.ಮುನಿರಾಜು, ಶ್ರೀನಿವಾಸಪುರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇರುವುದೇ ಇಲ್ಲ. ಮಧ್ಯಾಹ್ನ ಊಟಕ್ಕೆ ಹೋದವರೂ 3 ಗಂಟೆವರೆಗೂ ಬರುವುದಿಲ್ಲ. ನರ್ಸ್‌ಗಳ ಬಳಿ ತಪಾಸಣೆ ಮಾಡಿಸಿಕೊಂಡು ಹೋಗುವಂತೆ ಹೇಳುತ್ತಾರೆ.
–ವೈದ್ಯರು ದಿನದ 24 ತಾಸು ಕೆಲಸ ಮಾಡಲು ಸಾಧ್ಯವಿಲ್ಲ. ಸಿಬ್ಬಂದಿ ಹಾಜರಾತಿ ಮೇಲೆ ಕಣ್ಗಾವಲು ಇಡಲು ಶೇ 90ರಷ್ಟು ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ವೈದ್ಯರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಕೆಲಸ ಮಾಡಲೇಬೇಕು. ಕೆಲಸದ ಅವಧಿ ನಂತರ ತುರ್ತು ಪ್ರಕರಣಗಳು ಬಂದರೆ ವೈದ್ಯರು ಆಸ್ಪತ್ರೆಗೆ ಹಿಂದಿರುಗಿ ಚಿಕಿತ್ಸೆ ಕೊಡುತ್ತಾರೆ.

* ಮಂಜುನಾಥ್‌ ರೆಡ್ಡಿ, ಬಂಗಾರಪೇಟೆ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ರಕ್ತ ಪ್ರಯೋಗಾಲಯ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರಕ್ತ ಮಾದರಿ ಸಂಗ್ರಹಣೆಗೆ ಮತ್ತು ವರದಿ ಕೊಡಲು ಸತಾಯಿಸುತ್ತಾರೆ. ಸಮಯಕ್ಕೆ ಸರಿಯಾಗಿ ಪ್ರಯೋಗಾಲಯದ ಬಾಗಿಲು ತೆರೆಯುವುದಿಲ್ಲ.
–ಕೆಲ ಆಸ್ಪತ್ರೆಗಳ ರಕ್ತ ಪ್ರಯೋಗಾಲಯದಲ್ಲಿ ಸಮಸ್ಯೆಯಿದೆ. ಈ ಬಗ್ಗೆ ಸಾರ್ವಜನಿಕರ ದೂರು ಆಧರಿಸಿ ವೈದ್ಯರು ಹಾಗೂ ಪ್ರಯೋಗಾಲಯದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದೇವೆ. ವೈದ್ಯರ ಮತ್ತು ರಕ್ತ ಪ್ರಯೋಗಾಲಯ ಸಿಬ್ಬಂದಿಯ ಧೋರಣೆ ಬದಲಾಗದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.


* ಅನುಶ್ರೀ, ಮಾಲೂರು: ತಾಲ್ಲೂಕು ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಸ್ವಚ್ಛತೆಯಿಲ್ಲ. ಮಹಿಳೆಯರು ಮತ್ತು ಪುರುಷರಿಗೆ ಒಂದೇ ಶೌಚಾಲಯವಿದೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತ ತೂಕ ಮಾಡುವ ಉಪಕರಣವಿಲ್ಲ, ರಕ್ತದಾನ ಶಿಬಿರಗಳಲ್ಲಿ ಕೊಡುವ ಪುಶ್‌ಬಾಲ್‌ನ ಗುಣಮಟ್ಟ ಚೆನ್ನಾಗಿಲ್ಲ.
–ಆಸ್ಪತ್ರೆ ಶೌಚಾಲಯ ಸಮಸ್ಯೆ ಸರಿಪಡಿಸಿದ್ದೇವೆ. ಎಸ್‌ಎನ್‌ಆರ್‌ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ.

* ರೆಡ್ಡಪ್ಪ, ಕೆಜಿಎಫ್‌: 2 ವರ್ಷದ ಹಿಂದೆ ಆರಂಭವಾದ ಇ–ಆಸ್ಪತ್ರೆ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ಇರುವುದೇ ಇಲ್ಲ.
–ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇ–ಆಸ್ಪತ್ರೆ ಆರಂಭಿಸಲಾಗಿದೆ. ವಿದ್ಯುತ್‌ ಸಮಸ್ಯೆಯಿಂದಾಗಿ ಕೆಜಿಎಫ್‌ನಲ್ಲಿ ಸಂಪೂರ್ಣವಾಗಿ ಕೆಲಸ ಮಾಡುತ್ತಿಲ್ಲ. ವಿದ್ಯುತ್‌ ಸಮಸ್ಯೆ ಬಗೆಹರಿಸಿ ಇ–ಆಸ್ಪತ್ರೆ ವ್ಯವಸ್ಥೆ ಸರಿ ದಾರಿಗೆ ತರುತ್ತೇವೆ. ರಾತ್ರಿ ಪಾಳಿಯಲ್ಲೂ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇರಬೇಕು.

* ನಳಿನಿ, ಹೊಸಮಟ್ನಹಳ್ಳಿ: ಬಾಣಂತಿಯರಿಗೆ ಕೊಡುತ್ತಿದ್ದ ಮಡಿಲು ಕಿಟ್‌ ನಿಲ್ಲಿಸಲಾಗಿದೆ. ಕಿಟ್‌ನ ಬದಲಾಗಿ ಕೊಡುತ್ತಿದ್ದ ಸಹಾಯಧನ ಸಹ ಬರುತ್ತಿಲ್ಲ.
–ಮಡಿಲು ಕಿಟ್‌ ನಿಲ್ಲಿಸಿರುವುದರಿಂದ ಬಾಣಂತಿಯರಿಗೆ ಸಹಾಯಧನ ಕೊಡುತ್ತಿದ್ದೇವೆ. ಸಹಾಯಧನ ವಿತರಣೆ ನಿಲ್ಲಿಸಿಲ್ಲ. ಸಹಾಯಧನ ಪಡೆಯದ ಬಾಣಂತಿಯರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.

* ಧನಶೇಖರ್‌ ರಾಜು, ತೊಂಡಹಳ್ಳಿ, ಮುಳಬಾಗಿಲು ತಾಲ್ಲೂಕು: ನಂಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಜತೆಗೆ ಔಷಧ ಹಾಗೂ ಮಾತ್ರೆಗಳ ಕೊರೆತೆಯಿದೆ.
–ವೈದ್ಯರ ವರ್ಗಾವಣೆ ಆಗಿತ್ತು. ಹೊಸದಾಗಿ 15 ದಿನದ ಹಿಂದೆ ಮತ್ತೊಬ್ಬ ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧ ಮಾತ್ರೆ ಖರೀದಿಗೆ ಆಸ್ಪತ್ರೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ.

* ಚಂದ್ರಪ್ಪ, ಕುಂತೂರು, ಮಾಲೂರು ತಾಲ್ಲೂಕು: ಹೃದಯಾಘಾತಕ್ಕೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹೃದಯಾಘಾತದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವಷ್ಟರಲ್ಲಿ ಸಾವು ಸಂಭವಿಸಬಹುದು. ಆದ್ದರಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡಬೇಕು.
–ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎನ್‌ಸಿಡಿ ಕ್ಲಿನಿಕ್‌ ಇವೆ. ಈ ಕ್ಲಿನಿಕ್‌ಗಳಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕು. ಆಗಾಗ್ಗೆ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿಸಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಕೊಡಲು ಕ್ರಮ ಕೈಗೊಳ್ಳುತ್ತೇವೆ.

* ಉಮಾ, ಕೋಲಾರ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ಕಳವು ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಶಿಶು ಹಾಗೂ ತಾಯಂದಿರ ಸುರಕ್ಷತೆಗೆ ಏನು ಕ್ರಮ ಕೈಗೊಂಡಿದ್ದೀರಿ?
–ಎಸ್‌ಎನ್‌ಆರ್‌ ಹಾಗೂ ಕೆಜಿಎಫ್‌ ಜಿಲ್ಲಾ ಆಸ್ಪತ್ರೆಗಳಲ್ಲಿ ನವಜಾತ ಶಿಶು ಕಳವು ಪ್ರಕರಣಗಳು ನಡೆದಿವೆ. ಹೀಗಾಗಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

* ಕಿಶೋರ್‌, ನಂಗಲಿ: ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಮರ್ಪಕವಾಗಿ ಔಷಧ ಮಾತ್ರೆ ಸರಬರಾಜಾಗುತ್ತಿಲ್ಲ. ವೈದ್ಯರು ಹೊರಗೆ ಔಷಧ ಮಾತ್ರೆ ಖರೀದಿಸುವಂತೆ ಚೀಟಿ ಬರೆದು ಕೊಡುತ್ತಿದ್ದಾರೆ. ಆರ್‌ಎಂಪಿ ವೈದ್ಯರ ಹಾವಳಿ ಹೆಚ್ಚಿದೆ.
–ಆನ್‌ಲೈನ್‌ ಮೂಲಕ ಅಗತ್ಯವಿರುವಷ್ಟು ಔಷಧ ಮಾತ್ರೆ ಪಡೆಯಬಹುದು. ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧ ಮಾತ್ರೆ ಖರೀದಿಗೆ ₹ 50 ಸಾವಿರ ಅನುದಾನ ಬಿಡುಗಡೆ ಮಾಡಲಾಗಿದೆ.

* ವಿಜಯ್‌ಕುಮಾರ್‌, ರಾಜೇಂದ್ರಹಳ್ಳಿ: ಮಾಲೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಫಾರ್ಮಸಿಸ್ಟ್‌ಗಳ ಕೊರತೆಯಿದೆ.
–ಎಂಬಿಬಿಎಸ್‌ ಮಾಡಿದ ವೈದ್ಯರನ್ನು ಆದ್ಯತೆ ಮೇರೆಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ವೇತನ ಕಡಿಮೆಯಿರುವ ಕಾರಣಕ್ಕೆ ಫಾರ್ಮಸಿಸ್ಟ್‌ಗಳು ಕೆಲಸಕ್ಕೆ ಬರುತ್ತಿಲ್ಲ. ಹೆಚ್ಚುವರಿಯಾಗಿ ನರ್ಸ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ.

* ನಾರಾಯಣಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ: ಜಿಲ್ಲೆಯ ಗಡಿ ಭಾಗದ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಸಕಾಲಕ್ಕೆ ಆಂಬುಲೆನ್ಸ್‌ ಸೇವೆ ಸಿಗುವುದಿಲ್ಲ
–ಜಿಲ್ಲೆಯಲ್ಲಿ ಸದ್ಯ 36 ಆಂಬುಲೆನ್ಸ್‌ಗಳಿವೆ. ಆಂಬುಲೆನ್ಸ್‌ಗಳು 15 ಕಿ.ಮೀ ವ್ಯಾಪ್ತಿಯಲ್ಲಿ ಸೇವೆ ಒದಗಿಸಬೇಕೆಂಬ ನಿಯಮವಿದೆ. ಕೆಲ ಸಂದರ್ಭಗಳಲ್ಲಿ 15 ಕಿ.ಮೀ ವ್ಯಾಪ್ತಿ ಮೀರಿ ರೋಗಿಗಳನ್ನು ಹೊರಗೆ ಕರೆದೊಯ್ದರೆ ಸ್ಥಳೀಯವಾಗಿ ಸಕಾಲಕ್ಕೆ ಆಂಬುಲೆನ್ಸ್‌ ಸೇವೆ ಸಿಗುವುದಿಲ್ಲ. ಆದ ಕಾರಣ ಜಿಲ್ಲೆಗೆ ಹೆಚ್ಚುವರಿಯಾಗಿ 5 ಆಂಬುಲೆನ್ಸ್‌ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

* ಟಿ.ಕೃಷ್ಣಮೂರ್ತಿ, ಚಿಕ್ಕತಿರುಪತಿ: ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣವಾಗಿ ಒಂದು ವರ್ಷವಾದರೂ ಉದ್ಘಾಟನೆಯಾಗಿಲ್ಲ. ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆಯಿದ್ದು, ಆಸ್ಪತ್ರೆಯನ್ನು ಶೀಘ್ರವೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು.
–ಚಿಕ್ಕತಿರುಪತಿಗೆ ಲಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪವಿದ್ದು, ಅಲ್ಲಿ ಇಬ್ಬರು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕತಿರುಪತಿಯಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯು ಜನವರಿ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

* ಆನಂದ್, ಸೂಲಿಕುಂಟೆ: ಗ್ರಾಮದ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಸಿಕ್ಕಿದೆ. ಆದರೆ, ಇಲ್ಲಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೆಲಸದ ಅವಧಿ ಮುಗಿಯುವುದಕ್ಕೂ ಮುನ್ನವೇ ಮಧ್ಯಾಹ್ನ 3 ಗಂಟೆಗೆ ರೈಲು ಹತ್ತಿ ಬೆಂಗಳೂರು ಸೇರಿ ಬಿಡುತ್ತಾರೆ. ಇದರಿಂದ ಗ್ರಾಮಸ್ಥರಿಗೆ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತಿದೆ.
–ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಕೆಲಸದ ಅವಧಿ ಮುಗಿಯುವವರೆಗೂ ಆಸ್ಪತ್ರೆಯಲ್ಲೇ ಇರುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ.

* ಶಿವರಾಜ್‌, ಕೋಲಾರ: ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ನೀರಿನ ಸಮಸ್ಯೆ ಗಂಭೀರವಾಗಿದೆ. ಆಸ್ಪತ್ರೆ ಸಿಬ್ಬಂದಿ ಎಂಆರ್‌ಐ ಮತ್ತು ಸ್ಕ್ಯಾನಿಂಗ್‌ ಪರೀಕ್ಷೆಯನ್ನು ಖಾಸಗಿ ಲ್ಯಾಬ್‌ಗಳಲ್ಲಿ ಮಾಡಿಸುವಂತೆ ಚೀಟಿ ಬರೆದು ಕೊಡುತ್ತಿದ್ದಾರೆ.
–ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲೇ ಎಂಆರ್‌ಐ ಮತ್ತು ಸ್ಕ್ಯಾನಿಂಗ್‌ ಸೇವೆ ಲಭ್ಯವಿದೆ. ಈ ಸೇವೆಗಳಿಗೆ ಖಾಸಗಿ ಆಸ್ಪತ್ರೆ ಅಥವಾ ಲ್ಯಾಬ್‌ಗಳಿಗೆ ಹೋಗುವಂತೆ ಸಿಬ್ಬಂದಿ ಬರೆದುಕೊಟ್ಟಿರುವ ಚೀಟಿಯ ಪ್ರತಿ ಕೊಡಿ. ಖಂಡಿತ ಆ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಜರುಗಿಸುತ್ತೇವೆ.

* ಶಿವಣ್ಣ, ಶ್ರೀನಿವಾಸಪುರ: ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳಲ್ಲಿ ಸ್ಕ್ಯಾನಿಂಗ್‌ ಸೇವೆ ದುಬಾರಿಯಾಗಿದ್ದು, ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದ ಕಾರಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೇವೆ ಆರಂಭಿಸಬೇಕು.
–ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆಯಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೇವೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ.

* ಹನುಮಯ್ಯ, ವಕ್ಕಲೇರಿ: 4ನೇ ಶನಿವಾರದಂದು ಗ್ರಾಮದ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದ ಬಾಗಿಲು ತೆರೆಯುವುದೇ ಇಲ್ಲ. ಈ ಬಗ್ಗೆ ವೈದ್ಯರನ್ನು ಕೇಳಿದರೆ 4ನೇ ಶನಿವಾರದಂದು ಆಸ್ಪತ್ರೆಗೆ ರಜೆ ಎಂದು ಹೇಳುತ್ತಾರೆ. 4ನೇ ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಧ್ಯಾಹ್ನದವರೆಗೆ ತೆರೆಯಲೇಬೇಕು. ಜತೆಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡಬೇಕು. ವೈದ್ಯರು ಕರ್ತವ್ಯಕ್ಕೆ ಗೈರಾದರೆ ದೂರು ಕೊಡಿ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ.

–ನಿರ್ವಹಣೆ: ಜೆ.ಆರ್.ಗಿರೀಶ್‌ ಮತ್ತು ಕೆ.ಎಸ್‌ಸುದರ್ಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT