ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಸರ್ಕಾರ–ಸಮಾಜದ ಸಂಪರ್ಕ ಸೇತುವೆ: ಕುಲಪತಿ ಕೆಂಪರಾಜು ಹೇಳಿಕೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಕೆಂಪರಾಜು ಹೇಳಿಕೆ
Last Updated 5 ಮಾರ್ಚ್ 2021, 15:14 IST
ಅಕ್ಷರ ಗಾತ್ರ

ಕೋಲಾರ: ‘ಆಧುನಿಕತೆ ಬೆಳೆದಂತೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಪ್ರಬಲವಾಗುತ್ತಾ ಬಂದಿದೆ. ಮಾಧ್ಯಮವು ತಾಂತ್ರಿಕ ಬದಲಾವಣೆಯೊಂದಿಗೆ ಭವಿಷ್ಯದ ಮಾಧ್ಯಮವಾಗಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಟಿ.ಡಿ.ಕೆಂಪರಾಜು ಹೇಳಿದರು.

ಬೆಂಗಳೂರು ಉತ್ತರ ವಿ.ವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಭಾರತದಲ್ಲಿ ರಾಜಕೀಯ ಸಂವಹನದ ಸ್ಥಿತಿ’ ಕುರಿತ ಸಂವಾದ ಉದ್ಘಾಟಿಸಿ ಮಾತನಾಡಿ, ‘ಸಾಮಾಜಿಕ, ವೈಜ್ಞಾನಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರ ಜಾಗೃತಗೊಳಸುವುದು ಮಾಧ್ಯಮದ ಜವಾಬ್ದಾರಿ’ ಎಂದರು.

‘ದೇಶದ ರಾಜಕೀಯ ವ್ಯವಸ್ಥೆ ಬಲಿಷ್ಠವಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಕೈಗಾರಿಕಾ ನೀತಿ ರೂಪಿಸುವುದರ ಜತೆಗೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮಾಧ್ಯಮ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸುತ್ತದೆ. ಸರ್ಕಾರಗಳ ನೀತಿ ನಿಯಮ ಹಾಗೂ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮಾಧ್ಯಮ ಅತ್ಯಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಪತ್ರಿಕಾ ರಂಗವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ 4ನೇ ಅಂಗವಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಸರಿ ತಪ್ಪುಗಳನ್ನು ಸರಿಪಡಿಸಬೇಕು. ಪತ್ರಕರ್ತರು ತನಿಖಾ ವರದಿಗಾರಿಕೆ ಜತೆಗೆ ತಮ್ಮ ಕೌಶಲ ವೃದ್ಧಿಸಿಕೊಳ್ಳಬೇಕು. ರಾಜಕೀಯ ಸ್ಥಿರತೆ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜಕೀಯ ಅಸ್ಥಿರತೆ ಇದ್ದರೆ ದೇಶ ಅಭಿವೃದ್ಧಿಯಾಗುವುದಿಲ್ಲ’ ಎಂದು ಹೇಳಿದರು.

‘ದೇಶದ ಅಭಿವೃದ್ಧಿ ರಾಜಕೀಯ ಕ್ಷೇತ್ರದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಮಾಧ್ಯಮವು ಜೊತೆಯಾಗಬೇಕು. ಜನಸಾಮಾನ್ಯರ ಸಮಸ್ಯೆ ಪರಿಹರಿಸಲು ನಿರಂತರ ಸಂಪರ್ಕ ಪ್ರಕ್ರಿಯೆ ನಡೆಯಬೇಕು. ಮಾಧ್ಯಮವು ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಅರಿವಿರಬೇಕು: ‘ಭಾರತದವರು ಜಾಗತಿಕವಾಗಿ ಸಾಮಾಜಿಕ ಮಾಧ್ಯಮಗಳನ್ನು ಅತಿ ಹೆಚ್ಚು ಪರಿಣಾಮಕಾರಿಯಗಿ ಬಳಸಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ತುಂಬಾ ವ್ಯವಸ್ಥಿತವಾಗಿ ಬಳಸಿಕೊಂಡ ಏಕೈಕ ನಾಯಕರು ಪ್ರಧಾನಿ ನರೇಂದ್ರ ಮೋದಿಯವರು’ ಎಂದು ಬೆಂಗಳೂರು ವಿ.ವಿ ಸಂವಹನ ವಿಭಾಗದ ಮುಖ್ಯಸ್ಥ ಬಿ.ಕೆ.ರವಿ ಹೇಳಿದರು.

‘ಮಾಧ್ಯಮವು ರಾಜಕೀಯ ಮತ್ತು ರಾಜಕೀಯ ಪಕ್ಷಗಳು, ರಾಜಕೀಯ ವ್ಯಕ್ತಿಗಳ ಬಗ್ಗೆ ತಿಳಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತದೆ. ಸಂವಹನಕಾರರಿಗೆ ಎಲ್ಲಾ ವಿಷಯಗಳ ಬಗ್ಗೆ ಅರಿವಿರಬೇಕು. ಅಲ್ಲದೇ, ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳಿರಬೇಕು. ಪಕ್ಷ, ಪಕ್ಷದ ಮುಖಂಡರು, ಪ್ರಮುಖ ನಾಯಕರ ಬಗ್ಗೆ ತಿಳಿದಿರಬೇಕು’ ಎಂದು ತಿಳಿಸಿದರು.

‘ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಮತ್ತು ರಾಜಕೀಯ ಮುಖಂಡರ ಹೇಳಿಕೆಗಳು ಚುನಾವಣಾ ವ್ಯವಸ್ಥೆಯಲ್ಲಿ ಮುಖ್ಯವಾಗುತ್ತವೆ. ಅದರಲ್ಲೂ ಚುನಾವಣಾ ಧ್ಯೇಯ ವಾಕ್ಯ ಮುಖ್ಯವಾಗುತ್ತದೆ. ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಮಾಧ್ಯಮದ ಅಸ್ತಿತ್ವ ಉಳಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಉತ್ತರ ವಿ.ವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಕೆ.ಜನಾರ್ದನಂ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಿ.ಕುಮುದಾ, ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಆರ್‌.ಮಂಜುನಾಥ್‌, ಮೋಹನ್‌ಕುಮಾರ್, ಸಿ.ಎನ್.ಶ್ರೀನಿವಾಸ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT