ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯಲ್ಲಿ ಸಚಿವರ ವೀರಗಾಸೆ ನೃತ್ಯ

Last Updated 22 ಏಪ್ರಿಲ್ 2019, 15:31 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ, ಬೀರೇಶ್ವರ, ಬತ್ತೇಶ್ವರ, ಬೆಳ್ಳೂರೇಶ್ವರ ಹಾಗೂ ಬಿಡದೀಶ್ವರಸ್ವಾಮಿ ಜಾತ್ರೆಯಲ್ಲಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್ ವೀರಗಾಸೆ ನೃತ್ಯ ಮಾಡಿ ನೋಡುಗರನ್ನು ರಂಜಿಸಿದರು.

ವೀರಗಾಸೆ ಕಲಾವಿದರು ಕತ್ತಿ ತಿರುವುತ್ತಾ ನೃತ್ಯ ಪ್ರದರ್ಶನ ನೀಡಿ ಸಚಿವರನ್ನು ಸ್ವಾಗತಿಸಿದರು. ಆಗ ಸಚಿವರು ಕಲಾವಿದರಿಂದ ಕತ್ತಿ ಪಡೆದು ವೀರಗಾಸೆ ನೃತ್ಯ ಮಾಡುವ ನೋಡುಗರ ಗಮನ ಸೆಳೆದರು. ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆಯುವ ಈ ಜಾತ್ರೆಯು ಕುರುಬ ಸಮುದಾಯದ ಬಹು ದೊಡ್ಡ ದ್ಯಾವರ ಮತ್ತು ಜಾತ್ರೆಯಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳ ಜತೆಗೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ಕಾಗಿನೆಲೆ ಕನಕ ಗುರುಪೀಠದ ಮಹಾಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಜಾತ್ರೆಯ ಸಾನಿಧ್ಯ ವಹಿಸಿದ್ದಾರೆ. ಭಾನುವಾರ (ಏ.21) ಬೆಳಿಗ್ಗೆ ಬಸವನ ಸಮೇತ ಗುರುಗಳನ್ನು ಆಹ್ವಾನಿಸಿ ಜಾತ್ರೆಗೆ ಚಾಲನೆ ನೀಡಲಾಯಿತು. ನಂತರ ಗಂಗಾ ಪೂಜೆ, ನವಗ್ರಹ ಪೂಜೆ ನಡೆದವು.

ಸೋಮವಾರ ಬೆಳಿಗ್ಗೆ ನಾಗದೇವತೆಗಳಿಗೆ ತನಿ ಎರೆಯುವ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಂಡಿತು. ಹಿರಿಯರಿಗೆ ಬಟ್ಟೆ ಇಡುವುದು, ಗುಡಿ ಪೂಜೆ, ದೇವರಿಗೆ ರುದ್ರಾಭಿಷೇಕ, ದೇವರು ಹೊಳೆಯಾಡುವುದು, ತೆಂಗಿನಕಾಯಿ ಪವಾಡ, ದೀಪ ಆರತಿ ಕಾರ್ಯಕ್ರಮ, ಅಗ್ನಿಕುಂಡ ಪ್ರವೇಶ, ದೀಪೋತ್ಸವ ನಡೆದವು.

ಕರ್ನಾಟಕ ಹಾಗೂ ತಮಿಳುನಾಡಿನ ಕುರುಬ ಸಮುದಾಯದವರು ಭಾಗವಹಿಸಿದ್ದರು. ಬಿಡದೀಶ್ವರಸ್ವಾಮಿ ದೇವಾಲಯದ ಅಧ್ಯಕ್ಷ ದಯಾನಂದಸ್ವಾಮಿ, ಕಾರ್ಯದರ್ಶಿ ಎಂ.ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT