ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನತ್ತ ಶಾಸಕ ಎಚ್. ನಾಗೇಶ್‌?

ಮಹದೇವಪುರದಲ್ಲಿ ಕಣಕ್ಕಿಳಿಸಲು ‘ಕೈ’ ಪಡೆ ಚಿಂತನೆ
Last Updated 1 ಜನವರಿ 2023, 20:08 IST
ಅಕ್ಷರ ಗಾತ್ರ

ನವದೆಹಲಿ: ಕೋಲಾರ ಜಿಲ್ಲೆಯ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರನ್ನು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ‘ಕೈ’ ಪಾಳಯ ಚಿಂತನೆ ನಡೆಸಿದೆ.

ಈ ಸಂಬಂಧ ನಾಗೇಶ್ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ. ನಾಗೇಶ್ ಅವರನ್ನು ಸೇರಿಸಿಕೊಳ್ಳಲು ಉಭಯ ನಾಯಕರು ಉತ್ಸುಕತೆ ತೋರಿದ್ದಾರೆ ಎಂದು ಮೂಲಗಳು ಹೇಳಿವೆ.

ನಾಗೇಶ್ ಅವರು ಮಹದೇವಪುರದ ವೈಟ್‌ಫೀಲ್ಡ್‌ನವರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ, ಟಿಕೆಟ್‌ ಸಿಕ್ಕಿರಲಿಲ್ಲ. ಹಾಗಾಗಿ, ಮುಳಬಾಗಿಲಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಮುಳಬಾಗಿಲಿನ ಕಾಂಗ್ರೆಸ್‌ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಅವರ ಜಾತಿ ಪ್ರಮಾಣಪತ್ರವನ್ನು ಹೈಕೋರ್ಟ್‌ 2018ರಲ್ಲಿ ಅಸಿಂಧುಗೊಳಿಸಿತ್ತು. ಹೀಗಾಗಿ, ಅವರಿಗೆ ಸ್ಪರ್ಧೆ ಮಾಡಲು ಆಗಿರಲಿಲ್ಲ. ಚುನಾವಣೆಯಲ್ಲಿ ನಾಗೇಶ್ ಅವರಿಗೆ ಕೊತ್ತೂರು ಬೆಂಬಲ ನೀಡಿದ್ದರು. ನಾಗೇಶ್ ಗೆಲುವು ಸಾಧಿಸಿದ್ದರು.

ಮುಳಬಾಗಿಲಿನಲ್ಲಿ ಈ ಸಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟ ಎಂದು ಭಾವಿಸಿರುವ ನಾಗೇಶ್ ಅವರು ಮಹದೇವಪುರದಲ್ಲಿ ಕಣಕ್ಕೆ ಇಳಿಯಲು ಒಲವು ತೋರಿದ್ದಾರೆ. ‘ಸದ್ಯ ಯಾವುದೇ ಪಕ್ಷದ ಜತೆಗೆ ಗುರುತಿಸಿಕೊಂಡಿಲ್ಲ. ಸಂಕ್ರಾಂತಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮಹದೇವಪುರದಿಂದ ಸ್ಪರ್ಧಿಸಲು ಅಭಿಮಾನಿಗಳಿಂದ ಒತ್ತಡ ಇರುವುದು ನಿಜ’ ಎಂದು ನಾಗೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆಕಾಂಕ್ಷಿಗಳ ಅಸಮಾಧಾನ: ಮಹದೇವಪುರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಯಸಿ 12 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಆನಂದ ಕುಮಾರ್, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಲ್ಲೂರಹಳ್ಳಿ ನಾಗೇಶ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾವು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ
ಸೇರಿದ್ದಾರೆ.

ಆನಂದ ಕುಮಾರ್ ಅವರು ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಈ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ, ಮಹದೇವಪುರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸುವಂತೆ ಆನಂದ ಕುಮಾರ್ ಅವರಿಗೆ ಸಂಸದ ಡಿ.ಕೆ. ಸುರೇಶ್‌ ಸೂಚಿಸಿದ್ದರು. ಆನಂದ ಕುಮಾರ್ ಅರ್ಜಿ ಸಲ್ಲಿಸಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದರು.

ನಾಗೇಶ್ ಅವರ ಸೇರ್ಪಡೆ ಸಿದ್ಧತೆ ವಿಚಾರ ಗೊತ್ತಾಗುತ್ತಿದ್ದಂತೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಹಾಗೂ ಆನಂದ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ನೀಡಿ ಸಮಾಲೋಚಿಸಿದರು. ‘ಮಹದೇವಪುರ ದೊಡ್ಡ ಕ್ಷೇತ್ರ. ನಾಗೇಶ್ ಬಂದರೆ ಅವರಿಗೆ ಟಿಕೆಟ್‌ ಕೊಡಲಾಗುವುದು. ಅವರು ಬರದಿದ್ದರೆ ನಿಮ್ಮನ್ನು ಪರಿಗಣಿಸಲಾಗುವುದು’ ಎಂಬುದಾಗಿ ಆನಂದ ಕುಮಾರ್ ಅವರಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕೆಪಿಸಿಸಿ ನಿಗದಿಪಡಿಸಿದಷ್ಟು ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಪೈಕಿ ಯಾರಿಗಾದರೂ ಟಿಕೆಟ್‌ ನೀಡಲಿ. ಹೊರಗಿನವರಿಗೆ ಟಿಕೆಟ್‌ ನೀಡುವುದಾದರೆ ಅರ್ಜಿ ಆಹ್ವಾನಿಸುವ ಅಗತ್ಯ ಏನಿತ್ತು’ ಎಂದು ಆಕಾಂಕ್ಷಿಯೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT