ಭಾನುವಾರ, ಮೇ 22, 2022
25 °C

ಲಂಚ ನೀಡಿರುವುದು ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ಧ: ಶಾಸಕ ನಂಜೇಗೌಡ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ‘ನನ್ನ ಮೂರೂವರೆ ವರ್ಷದ ಅವಧಿಯಲ್ಲಿ ಬಹಳ ಉತ್ತಮ ಆಡಳಿತ ನೀಡಿದ್ದು, ಯಾವುದೇ ಗುತ್ತಿಗೆದಾರರಾಗಲಿ ಅಥವಾ ತಾಲ್ಲೂಕು ಅಧಿಕಾರಿಗಳಾಗಲಿ ನೂರು ರೂಪಾಯಿ ಲಂಚ ನೀಡಿದ್ದಾರೆ ಎಂದು ರುಜುವಾತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಕೆ.ವೈ. ನಂಜೇಗೌಡ ಸವಾಲು ಹಾಕಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಸೋಮವಾರ ವರ್ತಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಎಪಿಎಂಸಿ ಮಾರುಕಟ್ಟೆ ಇಲ್ಲದೆ ಬಹಳ ತೊಂದರೆಯಾಗಿತ್ತು. ಇಲ್ಲಿನ ಮಾರುಕಟ್ಟೆ ಸ್ಥಳದ ಬಗ್ಗೆ ಬಹಳ ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಾದ, ವಿವಾದ ನಡೆದು ಕಡೆಗೆ ಎಪಿಎಂಸಿ ಸಂಸ್ಥೆ ಪರವಾಗಿ ತೀರ್ಪು ಬಂದಿದ್ದರಿಂದ ಇಂದು ಎಪಿಎಂಸಿ ಮಾರುಕಟ್ಟೆ ಸುಮಾರು ಕೋಟಿಗಳಷ್ಟು ಕಾಮಗಾರಿ ನಡೆಯುವ ಮೂಲಕ ಅಭಿವೃದ್ಧಿಗೊಂಡಿದೆ ಎಂದು ತಿಳಿಸಿದರು.

ಪ್ರಸ್ತುತ 47 ವರ್ತಕರಿಗೆ ಎಪಿಎಂಸಿ ಕಾಯ್ದೆ ಅಡಿ ಲೀಸ್ ಮತ್ತು ಸೇಲ್ ಮಾಡುವ ಪ್ರಕ್ರಿಯೆ ನಡೆಸಲಾಗಿದೆ. ಅಲ್ಲದೇ 10 ಸಂಕೀರ್ಣಗಳನ್ನು ಸಹ ವರ್ತಕರಿಗೆ ನೀಡಲಾಗಿದೆ ಎಂದರು.

ಪಿಎಂಸಿ ಅಧಿಕಾರಿಗಳು ವರ್ತಕರಿಗೆ ನಿವೇಶನ ನೀಡುವ ಪ್ರಕ್ರಿಯೆಯಲ್ಲಿ ಲಂಚ ಕೇಳುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದರು. ಇದು ಸತ್ಯಕ್ಕೆ ದೂರವಾದುದು. ಸಭೆಯಲ್ಲಿ ಯಾವುದೇ ವರ್ತಕರು ದೂರು ನೀಡಿಲ್ಲ. ಶಾಸಕರಿಗೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ವಿರೋಧ ಪಕ್ಷದವರು ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಮಟ್ಟದ ಎಪಿಎಂಸಿ ಅಧಿಕಾರಿ ರವಿ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಯಾವ ವರ್ತಕರು ಸಭೆಯಲ್ಲಿ ದೂರು ನೀಡಿಲ್ಲ. ಎಪಿಎಂಸಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು ಪಾರದರ್ಶಕವಾಗಿ ಆಡಳಿತ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ನಂದಿನಿ ಪಾರ್ಲರ್ ನಡೆಸಲು ಅವಕಾಶ ಕೊಟ್ಟಿದ್ದಾರೆ. ಆದರೆ, ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಂದಿನಿ ಪಾರ್ಲರ್ ಆರಂಭಿಸಲು ಇಲ್ಲಿ ಕೆಲವು ವರ್ತಕರು ವಿರೋಧ ಮಾಡುತ್ತಿರುವುದು ಸರಿಯಿಲ್ಲ. ಒಕ್ಕೂಟದ ಅಧ್ಯಕ್ಷನಾಗಿರುವುದರಿಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಾಲು ಉತ್ಪಾದಕರಿಗೆ ಸಮರ್ಪಕ ಬೆಲೆ ನೀಡಲಾಗುತ್ತಿಲ್ಲ. ನಂದಿನಿ ಪದಾರ್ಥಗಳನ್ನು ದೇಶ, ವಿದೇಶಗಳಿಗೆ ತೆರಳಿ ವ್ಯಾಪಾರ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಂದಿನಿ ಪಾರ್ಲರ್ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸರಿಯಿಲ್ಲ. ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ವರ್ತಕ ಮಂಜುನಾಥ್ ಮಾತನಾಡಿ, ಪಾರ್ಲರ್ ಅನ್ನು ಎಪಿಎಂಸಿ ದ್ವಾರದಲ್ಲಿ ಸ್ಥಾಪನೆ ಮಾಡುವುದು ಬೇಡ. ಮಾರುಕಟ್ಟೆ ಒಳಗಡೆ ಮಾಡಿದರೇ ಅನುಕೂಲವಾಗುತ್ತದೆ
ಎಂದರು.

ಶಾಸಕರು ಮಾತನಾಡಿ, ನಿಮಗೂ ಇದಕ್ಕೂ ಸಂಬಂಧವಿಲ್ಲ. ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷ ಪಾರ್ಥಸಾರಥಿ, ನಿರ್ದೇಶಕರಾದ ಪಟ್ಲಪ್ಪ, ಗೋವಿಂದರಾಜು, ಮುನಿರಾಜು, ಸಬ್ದಾರ್ ಬೇಗ ಎಪಿಎಂಸಿ ಕಾರ್ಯದರ್ಶಿ ಶಿಲ್ಪಾ, ವರ್ತಕರಾದ ನಂಜುಂಡಪ್ಪ, ಎಂ.ವಿ. ಮಂಜುನಾಥ್, ಸೂರಪ್ಪ ದಸ್ತು ಕಾಂಗ್ರೆಸ್ ಮುಖಂಡರಾದ ಮದುಸೂದನ್, ಅಶ್ವಥ ರೆಡ್ಡಿ, ಎ. ರಾಜಪ್ಪ, ಮಂಜು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು