ಭಾನುವಾರ, ನವೆಂಬರ್ 29, 2020
25 °C

ಯತ್ನಾಳ ಹೇಳಿಕೆ ಶೋಭೆಯಲ್ಲ: ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡಿರುವುದು ಶೋಭೆಯಲ್ಲ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನನ್ನೂ ಒಳಗೊಂಡಂತೆ ಪಕ್ಷದ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿಗಳು ಅಥವಾ ಪಕ್ಷದ ಹಿರಿಯ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ತಪ್ಪು. ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಯತ್ನಾಳ ಅವರು ಈ ರೀತಿ ಮಾತನಾಡಬಾರದು. ಇದು ಅವರ ಘನತೆಗೆ ಶೋಭೆ ತರುವುದಿಲ್ಲ’ ಎಂದರು.

‘ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸೋಂಕಿತರ ಸಂಖ್ಯೆ ಮುಖ್ಯವಲ್ಲ. ಸೋಂಕಿತರ ಸಾವಿನ ಪ್ರಮಾಣ ಶೇ 1.3ಕ್ಕೆ ಇಳಿದಿದೆ. ರಾಜ್ಯದಲ್ಲಿ ಕೋವಿಡ್‌ ಸಂಪೂರ್ಣ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದರು.

‘ಈವರೆಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದಿರುವ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಬಾರಿ ಜಯ ಗಳಿಸಿದೆ. ಪಕ್ಷದಿಂದ ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಕ್ಷೇತ್ರದೆಲ್ಲೆಡೆ ಬಿಜೆಪಿ ಪರ ಅಲೆಯಿದ್ದು, ಪಕ್ಷದ ಅಭ್ಯರ್ಥಿ ಚಿದಾನಂದಗೌಡ ಅವರು ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಲ್ಲಿ ಬಿಜೆಪಿಗೆ ಸದೃಢ ನಾಯಕತ್ವ ಇದೆ. ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ಪದವೀಧರರು, ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಹಿತ ಕಾಯುವ ಶಕ್ತಿ ಸರ್ಕಾರಕ್ಕಿದೆ. ಪಕ್ಷದ ಮುಖಂಡರೆಲ್ಲರೂ ಸಂಘಟಿತ ಹೋರಾಟ ನಡೆಸುತ್ತಿದ್ದು, ಬಿಜೆಪಿಗೆ ಮತದಾರರ ಬೆಂಬಲ ಸಿಗುತ್ತದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿನ ಬಂಡಾಯ ಎದುರಿಸುವ ಶಕ್ತಿ ಪಕ್ಷಕ್ಕಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು