ಕಳ್ಳರಿಗೆ ರಕ್ಷಣೆ ನೀಡಿದ್ದೇ ಮೋದಿ ಸಾಧನೆ: ರಾಹುಲ್‌ ಗಾಂಧಿ ಲೇವಡಿ

ಬುಧವಾರ, ಏಪ್ರಿಲ್ 24, 2019
30 °C

ಕಳ್ಳರಿಗೆ ರಕ್ಷಣೆ ನೀಡಿದ್ದೇ ಮೋದಿ ಸಾಧನೆ: ರಾಹುಲ್‌ ಗಾಂಧಿ ಲೇವಡಿ

Published:
Updated:
Prajavani

ಕೋಲಾರ: ‘ನರೇಂದ್ರ ಮೋದಿ 15 ಮಂದಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ದೇಶದ ಬಡ ಜನರ ಹಿತಾಸಕ್ತಿ ಕಡೆಗಣಿಸಿ ಶ್ರೀಮಂತರ ಪಾಲಿಗೆ ಚೌಕೀದಾರ್‌ ಆಗಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದರು.

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಪರ ಇಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘5 ವರ್ಷ ದೇಶದ ಹಣ ಲೂಟಿ ಮಾಡಿ ಕಳ್ಳರಿಗೆ ರಕ್ಷಣೆ ನೀಡಿದ್ದೇ ಮೋದಿಯವರ ಬಹು ದೊಡ್ಡ ಸಾಧನೆ’ ಎಂದು ವ್ಯಂಗ್ಯವಾಡಿದರು.

‘ಮೋದಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಜನರ ₹ 30 ಸಾವಿರ ಕೋಟಿ ಹಣವನ್ನು ಅನಿಲ್ ಅಂಬಾನಿಗೆ ಕಳ್ಳತನ ಮಾಡಿಕೊಟ್ಟು ದೇಶಭಕ್ತನೆಂದು ಹೇಳಿಕೊಳ್ಳುತ್ತಿದ್ದಾರೆ. ರೈತರ, ಬಡವರ, ಕಾರ್ಮಿಕರ ಹಣ ಲೂಟಿ ಮಾಡಿರುವುದು ಜನರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಹೇಳಿದರು.

‘ಹಿಂದಿನ ಲೋಕಸಭಾ ಚುನಾವಣೆ ವೇಳೆ ಮೋದಿ ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ, ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುವುದಾಗಿ, ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳನ್ನೆಲ್ಲಾ ಮರೆತು ಜನರಿಗೆ ಮೋಸ ಮಾಡಿದರು’ ಎಂದು ದೂರಿದರು.

‘ಮೋದಿಯು ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ನೆಪದಲ್ಲಿ ಬಡವರು, ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದರು. ಜಿಎಸ್‌ಟಿ ಹೆಸರಿನಲ್ಲಿ ಶೇ 28ರಷ್ಟು ತೆರಿಗೆ ವಿಧಿಸಿ ಜನರ ಬದುಕು ಬರ್ಬರವಾಗಿಸಿದರು. ಹೋದ ಕಡೆಯಲ್ಲೆಲ್ಲಾ ಪೊಳ್ಳು ಭರವಸೆ ನೀಡುತ್ತಿರುವ ಮೋದಿ 5 ವರ್ಷದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ’ ಎಂದರು.

ಭರವಸೆ ಈಡೇರಿಸಿಲ್ಲ: ‘ನರೇಂದ್ರ ಮೋದಿ ಈ ಹಿಂದೆ ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಆದರೆ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ದೇಶದ ಸುಮಾರು 5 ಕೋಟಿ ಬಡ ಕುಟುಂಬಗಳ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹ 6 ಸಾವಿರ ಜಮಾ ಮಾಡುತ್ತದೆ. ರೈತರು ಕೃಷಿ ಸಾಲ ಮರು ಪಾವತಿಸದಿದ್ದರೂ ಅವರನ್ನು ಜೈಲಿಗೆ ಕಳುಹಿಸದಂತೆ ಕಾಯ್ದೆ ಜಾರಿಗೆ ತರುತ್ತೇವೆ. ದೇಶದಲ್ಲಿ ಖಾಲಿ ಇರುವ 24 ಲಕ್ಷ ಸರ್ಕಾರಿ ಹುದ್ದೆಗಳನ್ನು ವರ್ಷದಲ್ಲಿ ಭರ್ತಿ ಮಾಡುತ್ತೇವೆ’ ಎಂದು ಘೋಷಿಸಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆಯಡಿ ಬಡ ಕುಟುಂಬಗಳ ಖಾತೆಗೆ ವರ್ಷಕ್ಕೆ ₹ 72 ಸಾವಿರ ಹಾಕುತ್ತದೆ. ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುತ್ತೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಕರ್ನಾಟಕದಲ್ಲಿ ಯುವಕ ಯುವತಿಯರಿಗೆ ಯಾವುದೇ ಪರವಾನಗಿ ಇಲ್ಲದೆ ಹೊಸ ಉದ್ಯಮ ಆರಂಭಕ್ಕೆ ಅವಕಾಶ ನೀಡುತ್ತೇವೆ. ನರೇಗಾ ಅಡಿ 150 ದಿನಗಳ ಉದ್ಯೋಗ ಖಾತ್ರಿ ಅನುಷ್ಠಾನಗೊಳಿಸುತ್ತೇವೆ’ ಎಂದರು.

ಸುಳ್ಳು ಹೇಳುವುದಿಲ್ಲ: ‘ಮೋದಿಯವರಂತೆ ನಾನು ಸುಳ್ಳು ಹೇಳುವುದಿಲ್ಲ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಳು ಭರವಸೆ ಕೊಡುತ್ತಿಲ್ಲ. ನುಡಿದಂತೆ ನಡೆಯಲು ಅಧಿಕಾರಕ್ಕೆ ಬರುತ್ತೇವೆ. ಬಡವರು, ಕಾರ್ಮಿಕರು, ರೈತರ ಪರವಾದ ಆಡಳಿತ ನೀಡುತ್ತೇವೆ’ ಎಂದು ತಿಳಿಸಿದರು.

‘ಬಡವರಿಗೋಸ್ಕರ ಚಿಂತಕರು, ಆರ್ಥಿಕ ತಜ್ಞರ ಸಭೆ ಕರೆದು ದೇಶದ ಆದಾಯದಲ್ಲಿ ಬಡವರ ಖಾತೆಗೆ ಎಷ್ಟು ಹಣ ಹಾಕಬಹುದೆಂಬ ಬಗ್ಗೆ ಚರ್ಚಿಸಿದ್ದೇನೆ. ವೇದಿಕೆ ಮೇಲಿನ ಭಾಷಣಕ್ಕಾಗಿ ಮಾಹಿತಿ ಬೇಡ ಎಂದು ಹೇಳಿದಾಗ ತಜ್ಞರು ಅಂಕಿ ಅಂಶ ಸಮೇತ ಚೀಟಿ ಬರೆದು ನನ್ನ ಕೈಗಿಟ್ಟರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಷಕ್ಕೆ ₹ 72 ಸಾವಿರ ಹಾಕಲು ನಿರ್ಧರಿಸಿದ್ದೇವೆ. ದೇಶದ 5 ಕೋಟಿ ಕುಟುಂಬಗಳಿಗೆ ಈ ಯೋಜನೆ ಅನ್ವಯಿಸಲಿದೆ’ ಎಂದು ವಿವರಿಸಿದರು.

ಗೇಲಿ ಮಾಡುತ್ತಾರೆ: ‘ಮೋದಿ ನೀಡಿದ್ದ ₹ 15 ಲಕ್ಷ ಭರವಸೆಯಂತೆ ನಮ್ಮ ಮಾತು ಸುಳ್ಳಾಗುವುದಿಲ್ಲ. ನಾವು ಹೇಳಿದ್ದನ್ನು ಸಾಬೀತು ಮಾಡಿ ತೋರಿಸುತ್ತೇವೆ. ಮೋದಿ ಮತ್ತು ಬಿಜೆಪಿ ಮುಖಂಡರು ನ್ಯಾಯ್ ಯೋಜನೆ ಟೀಕಿಸುತ್ತಾರೆ, ಎಲ್ಲಿಂದ ₹ 72 ಸಾವಿರ ತರುತ್ತಾರೆ ಎಂದು ಗೇಲಿ ಮಾಡುತ್ತಾರೆ. ಮೋದಿ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅವರ ಪರಮಾಪ್ತರಾದ ಅನಿಲ್ ಅಂಬಾನಿಯಂತಹ ಕಳ್ಳ ಸ್ನೇಹಿತರ ಜೇಬಿನಿಂದಲೇ ಹಣ ವಸೂಲು ಮಾಡುತ್ತೇವೆ’ ಎಂದು ಸವಾಲು ಹಾಕಿದರು.

‘ರೈತರಿಗೆ ರಿಯಾಯಿತಿ ಘೋಷಿಸುತ್ತೇವೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಸಾಮಾನ್ಯ ಬೆಲೆ ಹಾಗೂ ಪ್ರೋತ್ಸಾಹಧನ, ಕೃಷಿ ಸಾಲ ಮನ್ನಾ, ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣವನ್ನು ಬಜೆಟ್‌ನಲ್ಲಿ ಘೋಷಿಸುತ್ತೇವೆ. ಪ್ರತಿ ವರ್ಷ ಹವಾಮಾನ ವೈಪರೀತ್ಯ ಆಧರಿಸಿ ಬೆಳೆ ಬೆಳೆಯುವ ಬಗ್ಗೆ ಕೃಷಿ ಹಂಗಾಮು ಆರಂಭದ ಮುನ್ನವೇ ತಿಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಎಸ್‌ಟಿ, ನೋಟು ಅಮಾನ್ಯೀಕರಣದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋಗಿವೆ. ದೇಶದ ಬ್ಯಾಂಕ್‌ಗಳ ಕೀಲಿ ಕೈಯನ್ನು ಕಳ್ಳರಿಂದ ಕಿತ್ತು ಯುವಕರ ಕೈಗೆ ಕೊಡುತ್ತೇವೆ. ಬ್ಯಾಂಕ್‌ಗಳಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವ ಯೋಜನೆ ಜಾರಿಗೆ ತರುತ್ತೇವೆ. ಕೇಂದ್ರದಲ್ಲಿ ರಾಜ್ಯಸಭೆ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !